KARNATAKA
ಕುಡಿದ ಮತ್ತಿನಲ್ಲಿ ತುಂಬು ಗರ್ಭಿಣಿ ಪತ್ನಿ ಸೇರಿ ನಾಲ್ವರನ್ನು ಕೊಲೆ ಮಾಡಿದ ಕುಡುಕ

ಮೈಸೂರು: ಕುಡಿದ ಮತ್ತಿನಲ್ಲಿ ತಿಂಗಳು ತುಂಬಿದ ಗರ್ಭಿಣಿ ಪತ್ನಿ ಸೇರಿ ಮನೆ ನಾಲ್ವರನ್ನು ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೊಲೆಗಾರನನ್ನು ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಚಾಮೇಗೌಡನ ಹುಂಡಿಯಲ್ಲಿ ಮಣಿಕಂಠಸ್ವಾಮಿ ಎಂದು ಗುರುತಿಸಲಾಗಿದ್ದು, ಈತ ತನ್ನ ತಾಯಿ ಸೇರಿದಂತೆ ಕುಟುಂಬದ ನಾಲ್ವರನ್ನು ಬುಧವಾರ ತಡರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಮೃತರನ್ನು ತಾಯಿ ಕೆಂಪಾಜಮ್ಮ (60), ಗರ್ಭಿಣಿ ಪತ್ನಿ ಗಂಗಾ(28), ಪುತ್ರರಾದ ರೋಹಿತ್ (4) ಮತ್ತು ಸಾಮ್ರಾಟ್ (4) ಎಂದು ಗುರುತಿಸಲಾಗಿದೆ.

ಗಾರೆ ಕೆಲಸ ಮಾಡಿಕೊಂಡಿದ್ದ ಮಣಿಕಂಠಸ್ವಾಮಿಗೆ ಕುಡಿತದ ಚಟ ಇತ್ತು. ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಈತ, ಕುಡಿದ ಅಮಲಿನಲ್ಲಿ ಅತ್ತೆ, ಹೆಂಡತಿ, ಇಬ್ಬರು ಮಕ್ಕಳ ತಲೆಯನ್ನು ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿ ನಾಲ್ವರು ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಣಿಕಂಠಸ್ವಾಮಿ ತಲೆ ಮರೆಸಿಕೊಂಡಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸರಗೂರು ಪಿಎಸ್ಐ ದಿವ್ಯಾ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.