Connect with us

DAKSHINA KANNADA

ಮಾಸ್ಕ್ ಧರಿಸದ ಕೂಲಿಕಾರ್ಮಿಕನಿಗೆ ದಂಡವನ್ನು ತಾವೇ ಭರಿಸಿ ಮಾನವೀಯತೆ ಮೆರೆದ ಅಧಿಕಾರಿಗಳು…!!

ಕಡಬ ಎಪ್ರಿಲ್ 29: ಮಾಸ್ಕ್ ಹಾಕಿಲ್ಲದ ಬಡ ಕೂಲಿಕಾರ್ಮಿಕರೊಬ್ಬರಿಗೆ ದಂಡ ವಿಧಿಸಿದ್ದ ಅಧಿಕಾರಿ ಕೊನೆಗೆ ಕೂಲಿ ಕಾರ್ಮಿಕ ಸ್ಥಿತಿ ನೋಡಿ ತಾವೇ ದಂಡದ ಹಣವನ್ನು ಕಟ್ಟಿ ಮಾನವೀಯತೆ ಮೆರೆದ ಘಟನೆ ಕಡಬ ಪೇಟೆಯಲ್ಲಿ ನಡೆದಿದೆ.


ಕೂಲಿ ಕೆಲಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ದಂಪತಿ ಮಾಸ್ಕ್ ಧರಿಸದೇ ಕಡಬ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ಸಂದರ್ಭ ಕಡಬ ಪಟ್ಟಣ ಪಂಚಾಯತ್ ನ ಕೊರೋನಾ ವಾರಿಯರ್‌ ತಂಡದ ಅಧಿಕಾರಿಯೋರ್ವರು ಮಾಸ್ಕ್ ಧರಿಸದ ಹಿನ್ನಲೆ 100 ರೂಪಾಯಿ ದಂಡ ವಿಧಿಸಿ ಜಿಲ್ಲಾಡಳಿತದ ರಶೀದಿಯನ್ನೂ ನೀಡಿದ್ದಾರೆ.

ಈ ವೇಳೆ ಹಣವಿಲ್ಲವೆಂದು ಪರಿ ಪರಿಯಾಗಿ ಬೇಡಿಕೊಂಡ ಕೂಲಿ ಕಾರ್ಮಿಕ ಕೊನೆಗೆ ತನ್ನ ಕೈಯಲ್ಲಿದ್ದ 10 ರೂ. ವನ್ನು ಅಧಿಕಾರಿಯ ಕೈಗಿತ್ತಿದ್ದಾರೆ. ಆದರೆ 100 ರೂಪಾಯಿ ರಶೀದಿಯನ್ನು ನೀಡಿದ ಅಧಿಕಾರಿ ಬೇರೆ ದಾರಿ ಕಾಣದೆ ತನ್ನ ಕೈಯಿಂದ ಉಳಿದ 90 ರೂಪಾಯಿ ಸೇರಿಸಿ ಸರಕಾರಕ್ಕೆ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿದ ಪಂಚಾಯತ್ ಅಧಿಕಾರಿಯವರು ಮಾಸ್ಕ್ ಧರಿಸದ ಕಾರಣ ನಾವು ಅನಿವಾರ್ಯವಾಗಿ ದಂಡ ವಿಧಿಸಲೇ ಬೇಕಾಗುತ್ತದೆ. ಆದರೆ ಸಾರ್ವಜನಿಕರ ಬಳಿ ಹಣ ಇಲ್ಲ ಎಂಬ ವಿಚಾರ ನಮ್ಮ ಗಮನಕ್ಕೆ ಬರುವುದಿಲ್ಲ. ಹಣ ನೀಡಿದ ನಂತರ ರಶೀದಿ ನೀಡೋಣ ಎಂದರೆ ಯಾರೂ ತಮ್ಮ ಬಳಿ ಹಣ ಇರುವ ಬಗ್ಗೆ ಹೇಳೋದು ಇಲ್ಲ. ದಂಡ ಬರೆದು ರಶೀದಿ ನೀಡಿದರೆ ಇಂತಹ ಸ್ಥಿತಿ ಎದುರಾಗುತ್ತಿದೆ ಎಂದು ಹೇಳಿದ್ದಾರೆ.