KARNATAKA
ಮೈಸೂರು – ಮೋದಿಯತ್ತ ಹೂವಿನ ಜೊತೆ ಮೊಬೈಲ್ ಎಸೆದ ಮಹಿಳೆ…ಮೊಬೈಲ್ ವಾಪಾಸ್ ನೀಡಿ ಅಂತ ಸನ್ನೆ ಮಾಡಿದ ಪ್ರಧಾನಿ

ಮೈಸೂರು ಮೇ 01: ಮೈಸೂರಿನಲ್ಲಿ ನಡೆದ ರೋಡ್ ಶೋ ಸಂದರ್ಭ ಮಹಿಳೆಯೊಬ್ಬರು ಹೂವು ಎಸೆಯುವ ವೇಳೆ ಅಚಾನಕ್ ಆಗಿ ಕೈಯಲ್ಲಿದ್ದ ಮೊಬೈಲ್ ನ್ನು ಎಸೆದಿದ್ದರು, ಈ ವೇಳೆ ಅದನ್ನು ನೋಡಿದ ಪ್ರಧಾನಿ ಮೋದಿ ಅವರು ಮೊಬೈಲ್ ನ್ನು ವಾಪಾಸ್ ನೀಡಿ ಎಂದು ಸನ್ನೆ ಮಾಡಿದ್ದು, ಮೊಬೈಲ್ ಫೋನ್ ಅನ್ನು ಮಹಿಳೆಗೆ ವಾಪಸ್ ನೀಡಿದ್ದಾರೆ.
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 4 ಕಿ.ಮೀವರೆಗೆ ರೋಡ್ ಶೋ ನಡೆಸಿ ಗಮನ ಸೆಳೆದಿದ್ದರು. ರೋಡ್ ಶೋದ ರಸ್ತೆಯ ಇಕ್ಕೆಲಗಳಗಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಮೋದಿ ನೋಡಿ ಪುಳಕಿತರಾದರು. ಅಷ್ಟೇ ಅಲ್ಲದೇ ಮೋದಿ, ಮೋದಿ ಎಂದು ಕೂಗಿ ಸಂಭ್ರಮಿಸಿದ್ದರು. ದಾರಿಯುದ್ದಕ್ಕೂ ಮೋದಿಗೆ ಹೂ ಸುರಿಸಿದರು. ಆದರೆ ಚಿಕ್ಕಗಡಿಯಾರದ ಬಳಿ ಹೂಗಳ ಮಧ್ಯೆ ಅಚಾನಕ್ ಆಗಿ ಮೊಬೈಲ್‍ವೊಂದು ತೂರಿ ಬಂದಿತ್ತು.

ಮೊಬೈಲ್ ಬಿದ್ದ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕ ಸೃಷ್ಟಿ ಆಗಿತ್ತು. ಅದನ್ನು ಸ್ವತಃ ಮೋದಿ ಹಾಗೂ ಎಸ್‍ಪಿಜಿಯವರು ಗಮನಿಸಿದ್ದರು. ಅಷ್ಟೇ ಅಲ್ಲದೇ ಮೋದಿ ಅವರು ರೋಡ್ ಶೋ ವೇಳೆಯೇ ಮೊಬೈಲ್ ಅನ್ನು ಹಿಂದಿರುಗಿಸುವಂತೆ ಸನ್ನೆಯನ್ನು ಮಾಡಿದ್ದರು. ಆದರೆ ಮೊಬೈಲ್ ಪ್ರಚಾರದ ವಾಹನದ ಮೇಲ್ಗಡೆ ಬಿದ್ದಿದ್ದರಿಂದ ಯಾವುದೇ ಅನಾಹುತಗಳು ಆಗಿರಲಿಲ್ಲ.
ಇದೀಗ ಘಟನೆಗೆ ಸಂಬಂಧಿಸಿ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮೊಬೈಲ್ ಫೋನ್ ಎಸೆದವರು ಮಹಿಳಾ ಬಿಜೆಪಿ ಕಾರ್ಯಕರ್ತೆಯಾಗಿದ್ದಾರೆ. ಅವರು ದುರುದ್ದೇಶದಿಂದ ಮೊಬೈಲ್ ಅನ್ನು ಎಸೆದಿಲ್ಲ, ಬದಲಿಗೆ ಹೂ ದಳಗಳನ್ನು ಎಸೆಯುವಾಗ ಆಕಸ್ಮಿಕವಾಗಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಎಸ್‍ಪಿಜಿಯವರು ಮೊಬೈಲ್ ಅನ್ನು ಮಹಿಳೆಗೆ ಹಿಂದಿರುಗಿಸಿದ್ದಾರೆ ಎಂದು ತಿಳಿಸಿದ್ದಾರೆ