KARNATAKA
ಮೈಸೂರು : ಕಿಲ್ಲರ್ ಡೆಂಗಿಗೆ ಆರೋಗ್ಯಾಧಿಕಾರಿಯೇ ಬಲಿ..!
ಮೈಸೂರು : ರಾಜ್ಯಾದ್ಯಾಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಮಲೇರಿಯಾ, ಡೆಂಗಿ ಜ್ವರದಂತಹ ಪ್ರಕರಣಗಳು ಹೆಚ್ಚಾಗಿವೆ. ಮೈಸೂರು ಜಿಲ್ಲೆಯಲ್ಲಿ ಕಿಲ್ಲರ್ ಡೆಂಗಿಗೆ ಆರೋಗ್ಯಾಧಿಕಾರಿಯೇ ಬಲಿಯಾಗಿದ್ದಾರೆ.
ಹುಣಸೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರ (32) ಮೃತ ಸಮುದಾಯ ಆರೋಗ್ಯ ಅಧಿಕಾರಿಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಡೆಂಗ್ಯುವಿಗೆ ಸಂಬಂಧಿಸಿ 3489 ಪರೀಕ್ಷೆ ನಡೆಸಲಾಗಿದ್ದು, 479 ಡೆಂಗಿ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 162 ಆ್ಯಕ್ಟೀವ್ ಪ್ರಕರಣಗಳಿವೆ. ಹುಣಸೂರು ತಾಲೂಕಿನಲ್ಲಿ ನಾಗೇಂದ್ರ ಅವರು ಸಮುದಾಯ ಆರೋಗಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡೆಂಗಿ ಜ್ವರದಿಂದ ಇದುವರೆಗೆ ರಾಜ್ಯದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ಮಂಗಳವಾರ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದರು. ನಿನ್ನೆ ಹಾಸನ ಜಿಲ್ಲೆಯಲ್ಲಿ ಒಬ್ಬಳು ಬಾಲಕಿ ಡೆಂಗಿ ನಿಂದ ಮೃತಪಟ್ಟಿದ್ದು ಡೆಂಗಿ ಖಚಿತವಾಗಬೇಕಿದೆ. ಬೆಂಗಳೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಇದುವರೆಗೂ 7 ಮಂದಿ ಡೆಂಗಿ ಗೆಬಲಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಹೆಚ್ಚುತ್ತಿರುವ ಡೆಂಗಿ ಪ್ರಕರಣಗಳ ಪತ್ತೆ ಪರೀಕ್ಷೆಗೆ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಡೆಂಗಿ ಜ್ವರ ಪತ್ತೆಗೆ ಎರಡು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳಿಗೆ ಒಟ್ಟು 600 ರೂ. ನಿಗದಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.ಡೆಂಗಿ ಜ್ವರ ಪತ್ತೆಗೆ ಎರಡು ಮಾದರಿಯ ಪರೀಕ್ಷೆ ನಡೆಸಲಾಗುತ್ತದೆ. ತಲಾ 300 ರೂ.ನಂತೆ ಒಟ್ಟು 600 ರೂ. ದರವನ್ನು ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗಿ ಪರೀಕ್ಷೆಗೆ ದುಪ್ಪಟ್ಟು ಹಣ ವಸೂಲಿಯಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಲು ಮುಂದಾಗಿದೆ.ಕ ಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗಿ ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದರು. ಖಾಸಗಿ ಆಸ್ಪತ್ರೆಗಳು ಡೆಂಗಿ ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗಿ ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು ಎಂದು ಸೂಚಿಸಿದ್ದು, ತಪ್ಪಿದಲ್ಲಿ ಕ್ರಮದ ಎಚ್ಚರಿಕೆ ನೀಡಿದ್ದಾರೆ.