LATEST NEWS
ಗಾಂಧೀಜಿ ಹತ್ಯೆ ಕುರಿತಂತೆ ನನ್ನ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಿರುಚಲಾಗಿದೆ….!!

ಮಂಗಳೂರು: ಮೈಸೂರು ದೇಗುಲ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ಸಂದರ್ಭ ಗಾಂಧೀಜಿ ಹತ್ಯೆ ಕುರಿತಂತೆ ಹೇಳಿಕೆ ನೀಡಿ ಬಿಜೆಪಿಗೆ ಬೆದರಿಕೆ ಹಾಕಿದ್ದ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್ ತಮ್ಮ ಹೇಳಿಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನ ನಂಜನಗೂಡಿನ ಹುಚ್ಚುಗಣಿ ಗ್ರಾಮದ ಮಹಾದೇವಮ್ಮನ ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಬಿಟ್ಟಿಲ್ಲ. ಇನ್ನು ನಿವೇಲ್ಲಾ ಯಾವ ಲೆಕ್ಕ ಎಂದು ಹೇಳಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆಯೇ ಧರ್ಮೇಂದ್ರ ತನ್ನ ಹೇಳಿಕೆಯ ಬಗ್ಗೆ ಕ್ಷಮೆಯಾಚನೆ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಧರ್ಮೇಂದ್ರ, ಹಿಂದೂವಾಗಿ ನಮ್ಮ ಶ್ರದ್ಧೆಯ ಕೇಂದ್ರ ದೇವಸ್ಥಾನ ಧ್ವಂಸವಾದ ಬಗ್ಗೆ ಅಸಹನೆಯಿಂದ ಮಾತನಾಡಿದ್ದೇನೆ. ಇದರ ಹಿಂದೆ ಯಾವುದೇ ಬೆದರಿಕೆ ಹಾಕುವ ದುರುದ್ದೇಶ ಇಲ್ಲ. ಗಾಂಧೀಜಿ ಹತ್ಯೆಯ ಕಾರಣವನ್ನು ವಿವರಿಸುವ ಭರದಲ್ಲಿ ಈ ಹೇಳಿಕೆ ಬಂದಿದೆ. ಈ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ. ಗಾಂಧೀಜಿ ಹತ್ಯೆ ಕುರಿತಂತೆ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಿರುಚಲಾಗಿದ್ದು, ಹೇಳಿಕೆಯ ಉದ್ದೇಶವನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದೆ ಎಂದು ಅವರು ಹೇಳಿದರು.