LATEST NEWS
ಹೆಬ್ರಿಯಲ್ಲಿ ಬೆನಾಮಿ ಆಸ್ತಿ – ಲೋಕಾಯುಕ್ತಕ್ಕೆ ದೂರು ನೀಡಿದ ಪ್ರಮೋದ್ ಮುತಾಲಿಕ್
ಉಡುಪಿ ಮಾರ್ಚ್ 03 : ಕಾರ್ಕಳದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಬೆನ್ನಲ್ಲೇ ಇದೀಗ ಮುತಾಲಿಕ್ ತಮ್ಮ ಶಿಷ್ಯನ ವಿರುದ್ದ ಯುದ್ದ ಸಾರಿದ್ದು, ಇದೀಗ ಪ್ರಭಾವಿ ಸಚಿವರ ವಿರುದ್ದ ಭ್ರಷ್ಟಾಚಾರದ ಆರೋಪ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಹೆಬ್ರಿ ತಾಲ್ಲೂಕಿನ ಶಿವಪುರ ಕೆರೆಬೆಟ್ಟು ಗ್ರಾಮದಲ್ಲಿ 67 ಎಕರೆ 94 ಸೆಂಟ್ಸ್ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಲಾಗಿದ್ದು ತನಿಖೆ ನಡೆಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುರುವಾರ ಲೋಕಾಯುಕ್ತ ಕಚೇರಿಗೆ ದಾಖಲೆಗಳ ಸಹಿತ ದೂರು ಸಲ್ಲಿಸಿದರು.
ಬೇನಾಮಿ ಆಸ್ತಿ ಖರೀದಿಯ ಹಿಂದೆ ಜಿಲ್ಲೆಯ ಪ್ರಭಾವಿ ಸಚಿವರು ಹಾಗೂ ಸಂಬಂಧಿಗಳ ಕೈವಾಡವಿದ್ದು ಪ್ರಕರಣದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಮುಖ್ಯಮಂತ್ರಿಗಳ ಆಪ್ತರೂ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇರುವುದರಿಂದ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. 53 ರೈತರಿಂದ ಒತ್ತಾಯಪೂರ್ವಕವಾಗಿ ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿ ಮಾಡಿ ಬಳಿಕ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ನಾಲ್ಕೈದು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿದೆ. ಸರ್ಕಾರವೇ ನೇರವಾಗಿ ರೈತರಿಂದ ಭೂಮಿ ಖರೀದಿ ಮಾಡಬಹುದಿತ್ತು ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು. ಯಾವುದೇ ಉದ್ಯೋಗ, ಆದಾಯ ಇಲ್ಲದ ಬಿಜೆಪಿ ಪದಾಧಿಕಾರಿಗಳಾಗಿರುವ ದಂಪತಿ ಕೋಟ್ಯಂತರ ರೂಪಾಯಿ ಮೌಲ್ಯದ 67 ಎಕರೆ ಭೂಮಿಯನ್ನು ಖರೀದಿ ಮಾಡಲು ಸಾಧ್ಯವಾಗಿದ್ದು ಹೇಗೆ, ಹಣದ ಮೂಲ ಯಾವುದು ಎಂಬುದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.