LATEST NEWS
ವಯೋಮಿತಿ ಏರಿಕೆ ಭೀತಿ – ಮುಸ್ಲಿಂ ಸಮುದಾಯದಲ್ಲಿ ಬಾರೀ ಸಂಖ್ಯೆಯಲ್ಲಿ ಮದುವೆ ಕಾರ್ಯಕ್ರಮ
ಹೈದ್ರಾಬಾದ್ : ಕೇಂದ್ರ ಸರಕಾರ ಹೆಣ್ಮಕ್ಕಳ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೆ ಇದೀಗ ಮುಸ್ಲಿಂ ಸಮುದಾಯದಲ್ಲಿ ವಿವಾಹ ಸವಾರಂಭ ಹೆಚ್ಚಾಗಿದೆ. ತೆಲಂಗಾಣ ಮತ್ತು ಹೈದರಬಾದ್ ನಲ್ಲಿ ಅತಿ ಹೆಚ್ಚು ಮದುವೆಗಳು ನಡೆಯುತ್ತಿದೆ ಎಂದು ವರದಿಯಾಗಿದೆ.
ಕಳೆದ ತಿಂಗಳು ಸಂಸತ್ತಿನಲ್ಲಿ ಬಾಲ್ಯವಿವಾಹ ತಿದ್ದುಪಡಿ ವಿಧೇಯಕ 2021 ಅನ್ನು ಮಂಡಿಸಿದಾಗಿನಿಂದ ಉಂಟಾಗಿರುವ ತಲ್ಲಣದಿಂದಾಗಿ ರಾಜ್ಯದಲ್ಲಿ ಪ್ರತಿದಿನ ನೂರಾರು ವಿವಾಹಗಳು ನಡೆಯುತ್ತಿವೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ತಿಳಿಸಿದೆ.
ವಿರೋಧ ಪಕ್ಷಗಳ ಆಕ್ಷೇಪಣೆಗಳ ನಂತರ ಮಸೂದೆಯನ್ನು ಆಯ್ಕೆ ಸಮಿತಿಗೆ ಶಿಫಾರಸು ಮಾಡಲಾಗಿದೆ. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಗುತ್ತದೆ ಎಂಬ ಆತಂಕದ ಹಿನ್ನಲೆ ಈ ಕಾನೂನು ಜಾರಿಯಾದರೆ ಮೂರು ವರ್ಷಗಳ ಕಾಲ ತಮ್ಮ ಹೆಣ್ಣು ಮಕ್ಕಳ ವಿವಾಹ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಪೋಷಕರು ತಕ್ಷಣ ಮದುವೆಗೆ ಮುಂದಾಗುವಂತೆ ವರನ ಪೋಷಕರಿಗೆ ಮನವರಿಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಾನೂನಿನ ಪ್ರಕಾರ ಮದುವೆಯ ವಿಧಿ ವಿಧಾನಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಹಲವು ಖಾಜಿಗಳು ಪ್ರತಿದಿನ 10-20 ಮದುವೆ ನಡೆಸುತ್ತಿದ್ದಾರೆ. ಮಸೀದಿಗಳು ಮತ್ತು ಫಂಕ್ಷನ್ ಹಾಲ್‌ಗಳಲ್ಲಿ ಮಾತ್ರವಲ್ಲದೆ ಮನೆಗಳಲ್ಲಿಯೂ ನಿಕಾಹ್ ಏರ್ಪಡಿಸಲಾಗುತ್ತಿದೆ. ರಾಜ್ಯ ವಕ್ಫ್ ಮಂಡಳಿಯಿಂದ ನೇಮಕಗೊಂಡ ಖಾಜಿಗಳು ಕಾನೂನು ವಿಧಿ ವಿಧಾನಗಳನ್ನು ಪೂರ್ಣಗೊಳಿಸಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಧಾವಿಸುತ್ತಿರುವುದು ಕಂಡುಬರುತ್ತಿದೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.