KARNATAKA
ಮುರುಘಾ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ – ಬಿಗಿ ಪೊಲೀಸ್ ಬಂದೋಬಸ್ತ್
ಚಿತ್ರದುರ್ಗ ಸೆಪ್ಟೆಂಬರ್ 01: ಮುರುಘಾ ಮಠದ ಶರಣರು ಹಾಗೂ ಅವರ ಉತ್ತರಾಧಿಕಾರಿ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ನಿರೀಕ್ಷಣಾ ಜಾಮೀನು ಕೋರಿ ಅಗಸ್ಟ್ 30ರಂದು ಶರಣರು ಅರ್ಜಿ ಸಲ್ಲಿಸಿದ್ದರು. ಮುರುಘಾ ಶರಣರ ಉತ್ತರಾಧಿಕಾರಿ ಬಸವಾದಿತ್ಯ ಅವರೂ ಫೋಕ್ಸೊ ಪ್ರಕರಣದಲ್ಲಿ A-3 ಆರೋಪಿಯಾಗಿದ್ದು, ಅವರೂ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯೂ ಇಂದು ವಿಚಾರಣೆಗೆ ಬರಲಿದೆ.
ಪೋಕ್ಸೊ ಪ್ರಕರಣದ ಆರೋಪಿ ಡಾ. ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಿದ್ದಾರೆ. ನ್ಯಾಯಾಲಯದ ಮುಂಭಾಗದ ರಸ್ತೆಯ ಎರಡು ಕಡೆ ಬ್ಯಾರಿಕೇಡ್ ಆಳವಡಿಸಿದ್ದಾರೆ. ವಾಹನಗಳ ತಪಾಸಣೆ ನಡೆಸಿ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ. ಈಗಾಗಲೇ ಸಂತ್ರಸ್ತ ಬಾಲಕಿಯರು ಕೋರ್ಟ್ ಗೆ ಹಾಜರಾಗಿದ್ದು, ಕೆಲ ಹೊತ್ತಿಗೆ ಜಾಮೀನು ಅರ್ಜಿಯ ವಿಚಾರಣೆ ಪ್ರಾರಂಭವಾಗಲಿದೆ. ಆದರೆ ಸಂತ್ರಸ್ತ ಬಾಲಕಿಯರು ಮುರುಘಾ ಶರಣರಿಗೆ ಜಾಮೀನು ನೀಡದಂತೆ ನ್ಯಾಯಾಧೀಶರಿಗೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.