Connect with us

LATEST NEWS

ಫಾಝಿಲ್ ಕೊಲೆಯ ಮರು ತನಿಖೆಗೆ ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಆಗ್ರಹ

ಮಂಗಳೂರು ಜನವರಿ 30:ಸುರತ್ಕಲ್ ನಲ್ಲಿ ಪಾಝೀಲ್ ಕೊಲೆಯನ್ನು ನಮ್ಮ ಹುಡುಗರು ಎಲ್ಲರ ಎದುರೇ ಶೌರ್ಯದಿಂದ ನುಗ್ಗಿ ಮಾಡಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪ್‌ವೆಲ್ ಹೇಳಿಕೆ ವಿರುದ್ದ ಇದೀಗ ಆಕ್ರೋಶ ವ್ಯಕ್ತವಾಗಿದ್ದು, ಪಾಝೀಲ್ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.


ಶರಣ್ ಪಂಪ್‌ವೆಲ್ ಅವರ ಅತಿರೇಕದ ದ್ವೇಷ ಭಾಷಣ, ಕೊಲೆಗಳ ಸಮರ್ಥನೆ, ಬೆದರಿಕೆ ಜನಾಂಗ ಹತ್ಯೆಗೆ ಪ್ರಚೋದನೆ ನೀಡುವಂತಿದೆ‌. ನಿರುದ್ಯೋಗ, ಬಡತನದಿಂದ ಹತಾಶಗೊಂಡಿರುವ ಯುವಕರ ಕೈಗೆ ತಲವಾರು ನೀಡಿ ಗಲಭೆಗಿಳಿಸುವ, ಇಡೀ ಸಮಾಜವನ್ನು ಅಪರಾಧೀಕರಣಗೊಳಿಸುವ, ಚುನಾವಣೆ ಸನಿಹದಲ್ಲಿರುವ ಸಂದರ್ಭ ಮತೀಯ ಧ್ರುವೀಕರಣ ರಾಜಕೀಯ ದುರುದ್ದೇಶಗಳನ್ನು ಹೊಂದಿದೆ. ಹಾಗೂ ಶರಣ್ ಪಂಪ್ ವೆಲ್ ಗೆ ಬಿಜೆಪಿ ಸರಕಾರದ ಬೆಂಬಲವೂ ದೊರಕಿರುವುದು ಎದ್ದು ಕಾಣುತ್ತಿದೆ‘ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ತಿಳಿಸಿದ್ದಾರೆ. ‘ಫಾಝಿಲ್ ಕೊಲೆಗೆ ವಿಎಚ್‌ಪಿ, ಬಿಜೆಪಿ ಮುಖಂಡರ ಬೆಂಬಲ ದೊರಕಿರುವ ಅನುಮಾನ ಕೊಲೆ ನಡೆದ ಸಂದರ್ಭದಲ್ಲೇ ವ್ಯಕ್ತವಾಗಿತ್ತು.

ಪೊಲೀಸರು ರಾಜಕೀಯ ಒತ್ತಡದಿಂದ ಕೊಲೆಯ ಪಿತೂರಿದಾರರನ್ನು ರಕ್ಷಿಸುತ್ತಿದ್ದಾರೆ ಎಂದು ಫಾಝಿಲ್ ಕುಟುಂಬ ಆರೋಪಿಸಿತ್ತು. ಶರಣ್ ಪಂಪ್ ವೆಲ್ ಭಾಷಣ ಈ ಅನುಮಾನ, ಆರೋಪವನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಪುಷ್ಟೀಕರಿಸಿದೆ‘ ಎಂದು ಹೇಳಿದ್ದಾರೆ. ‘ಅಮಾಯಕ ಫಾಝಿಲ್ ಕೊಲೆಯಾದ ಸಂದರ್ಭ ರಾಜ್ಯ ಸರ್ಕಾರ ಸಾಂತ್ವನ ಹೇಳಲಿಲ್ಲ. ಪರಿಹಾರ ಒದಗಿಸದೇ ಸಂತ್ರಸ್ತ ಕುಟುಂಬಕ್ಕೆ ತಾರತಮ್ಯವೆಸಗಿದೆ. ಪ್ರಕರಣದ ತನಿಖೆಯೂ ದುರ್ಬಲವಾಗಿ ನಡೆದಿದೆ. ಈಗ ಫಾಝಿಲ್ ಕೊಲೆಯನ್ನು ಬಜರಂಗ ದಳದ ಕಾರ್ಯಕರ್ತರ ಶೌರ್ಯದ ಸಂಕೇತ ಎಂದು ಭಾಷಣ ಬಿಗಿಯಲು‌ ಅವಕಾಶ ಒದಗಿಸಿ ಆ ಸಂತ್ರಸ್ತ ಕುಟುಂಬವನ್ನು ಮತ್ತಷ್ಟು ನೋವುಣ್ಣುವಂತೆ ಮಾಡಲಾಗುತ್ತಿದೆ.

ಮುಸ್ಲಿಂ ಸಮುದಾಯದ ವಿರುದ್ದ ಇನ್ನಷ್ಟು ದ್ವೇಷ ಹರಡುವ ಯತ್ನವೂ ಇದರ ಹಿಂದಿದೆ. ಸರ್ಕಾರಿ ಪ್ರಾಯೋಜಿತ ಇಂತಹ ಯೋಜನಾಬದ್ದ ಜನಾಂಗ ದ್ವೇಷದ ಕೆಲಸಗಳು ಮುಸ್ಲಿಂ ಸಮುದಾಯದೊಳಗೆ ನಕಾರಾತ್ಮಕ ಶಕ್ತಿಗಳ ಬೆಳವಣಿಗೆಗೂ ಕುಮ್ಮಕ್ಕು‌ ನೀಡುತ್ತವೆ. ಇದು ಸಮಾಜವನ್ನು ಅಪಾಯಕಾರಿ ವಿಭಜನೆಯೆಡೆಗೆ ಒಯ್ಯುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ. ‘ನಾಗರಿಕ ಸಮಾಜ ಒಂದಾಗಿ ಶರಣ್ ಪಂಪ್ ವೆಲ್ ಭಾಷಣವನ್ನು ಖಂಡಿಸಬೇಕು ಹಾಗೂ ಕ್ರಮಕ್ಕಾಗಿ ಒತ್ತಾಯಿಸಬೇಕು’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Advertisement
Click to comment

You must be logged in to post a comment Login

Leave a Reply