KARNATAKA
ಮುಳ್ಳೇರಿಯಾ: ಕನ್ನಡ ಬಾರದ ಸರ್ಕಾರಿ ಶಾಲೆಯ ಶಿಕ್ಷಕಿ ವಿರುದ್ದ ವಿದ್ಯಾರ್ಥಿಗಳ ಪ್ರತಿಭಟನೆ

ಮುಳ್ಳೇರಿಯಾ, ಆಗಸ್ಟ್ 04: ಮುಳ್ಳೇರಿಯಾ ಸಮೀಪದ ಆದೂರು ಸರ್ಕಾರಿ ಹಿರಿಯ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಭೌತಶಾಸ್ತ್ರ ಪಾಠಕ್ಕೆ ಕನ್ನಡ ತಿಳಿಯದ ಶಿಕ್ಷಕಿಯೊಬ್ಬರನ್ನು ನೇಮಿಸಲಾಗಿದೆ ಎಂದು ಆರೋಪಿಸಿ ಬುಧವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಈ ಶಿಕ್ಷಕಿಯು 2019ರಲ್ಲಿ ಪೈವಳಿಕೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇರ್ಪಡೆಯಾಗಿದ್ದರು. ನಂತರ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ರಜೆಯಲ್ಲಿ ತೆರಳಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಪಡೆಯಲು ಮೈಸೂರಿನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಅಫ್ ಇಂಡಿಯನ್ ಲಾಂಗ್ವೇಜಸ್ ಸಂಸ್ಥೆಗೆ 10 ತಿಂಗಳ ತರಬೇತಿಗೆ ತೆರಳಿದ್ದರು. ಇದೀಗ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಆದೇಶದಂತೆ ಆದೂರು ಶಾಲೆಗೆ ಮಂಗಳವಾರ ಸೇರ್ಪಡೆಗೊಂಡಿದ್ದರು.

ಕನ್ನಡ ಬಾರದ ಶಿಕ್ಷಕಿಯ ತರಗತಿಯು ಅರ್ಥವಾಗುತ್ತಿಲ್ಲ ಎಂದು ದೂರಿದ ಕನ್ನಡ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಿಗೆ ಮನವಿ ನೀಡಿದರು. ಶಿಕ್ಷಕಿಯನ್ನು ವರ್ಗಾಯಿಸುವ ವರೆಗೆ ತರಗತಿ ಬಹಿಷ್ಕರಿಸಲು ನಿರ್ಧಿರಿಸಿದ್ದು, ಪೋಷಕರೂ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.