LATEST NEWS
ಮುಲ್ಕಿ – ಅಷ್ಟು ದೊಡ್ಡ ರಥ ಬಿದ್ದರೂ ಭಕ್ತರಿಗೆ ಒಂದು ಸಣ್ಣ ಗಾಯವಾಗದಂತೆ ತಡೆದ ದುರ್ಗಾಪರಮೇಶ್ವರಿ

ಮಂಗಳೂರು ಎಪ್ರಿಲ್ 19: ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವ ವೇಳೆ ಬ್ರಹ್ಮರಥೋತ್ಸವ ಮೇಲ್ಬಾಗ ಕಳಚಿ ಬಿದ್ದಿದ್ದು ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ. ಅಷ್ಟು ದೊಡ್ಡ ತೇರಿನ ಮೇಲ್ಬಾಗ ಕೇಳಗೆ ಬಿದ್ದರೂ ರಥದ ಸಮೀಪವೇ ಇದ್ದ ಯಾವುದೇ ಭಕ್ತರಿಗೆ ಸಣ್ಣ ಅಪಾಯ ಕೂಡ ಆಗದಂತೆ ದೇವಿಯೇ ತಡೆದಿದ್ದಾಳೆ ಎನ್ನುವುದು ಇದೀಗ ಭಕ್ತರ ಮಾತು.
ಇತ್ತೀಚೆಗೆ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ರಥ ಬಿದ್ದು ಇಬ್ಬರು ಸಾವನಪ್ಪಿ ಹಲವು ಗಾಯಗೊಂಡಿದ್ದರು, ಅದೇ ರೀತಿ ಮುಲ್ಕಿಯಲ್ಲಿ ಮುಂಜಾನೆ ವೇಳೆ ಅವಘಢ ಸಂಭವಿಸಿದೆ ಆದರೆ ಯಾವುದೇ ಭಕ್ತರಿಗೆ ಸಣ್ಣ ಗಾಯಗಳಾಗದಂತೆ ದೇವಿ ಕಾಪಾಡಿದ್ದಾಳೆ. ದೇವಸ್ಥಾನದ ರಥೋತ್ಸವದ ವೇಳೆ ತೇರು ಮುರಿದು ಬಿದ್ದ ಅವಘಡ ಈಗ ಕರಾವಳಿಯಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಯಾವುದೋ ದೋಷವಿರಬೇಕು. ದೇವಿ ಮುನಿಸಿಕೊಂಡಿದ್ದಾಳೆ. ಇದು ಅಪಶಕುನದ ಸೂಚನೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಭಕ್ತರು ಮಾಧ್ಯಮಗಳ ಜೊತೆ ಮಾತನಾಡುತ್ತಾ ‘ದೇವಿ ಒಂದು ಸಂದೇಶ ಕೊಟ್ಟಿದ್ದಾಳೆ, ಸರಿ ಮಾಡಿಕೊಳ್ಳಿ ಎಂದು ಎಚ್ಚರಿಸಿದ್ದಾಳೆ’ ಎಂದಿದ್ದಾರೆ.

ಬಪ್ಪನಾಡು ಕ್ಷೇತ್ರದ ರಥೋತ್ಸವದಲ್ಲಿ ನಡೆದ ದುರ್ಘಟನೆ ಇದೇ ಮೊದಲಲ್ಲ. ಕಳೆದ ಬಾರಿ ಇದಕ್ಕಿಂತ ದೊಡ್ಡ ದುರಂತ ಸಂಭವಿಸುತ್ತಿತ್ತು. ಕಳೆದ ಬಾರಿ ರಥ ಒಂದು ಕಡೆ ವಾಲಿ ದುರಂತ ಸಂಭವಿಸಿತ್ತು. ದೊಡ್ಡ ದುರ್ಘಟನೆ ತಪ್ಪಿ ಹೋಗಿತ್ತು. ಮತ್ತೆ ಈ ಬಾರಿ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಇತ್ತು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ರಥದ ಚಕ್ರದ ಆ್ಯಕ್ಸಲ್ ತುಂಡಾಗಿ ಈ ಅವಘಡ ಸಂಭವಿಸಿದೆ. ರಥದ ಮುಂಭಾಗದ ಚಕ್ರ ಸಂಪೂರ್ಣವಾಗಿ ಕಿತ್ತು ಬಂದಿದೆ. ಮುಂಭಾಗದ ಎರಡು ಚಕ್ರಕ್ಕೆ ಅಳವಡಿಸಿದ್ದ ಮರದ ಆ್ಯಕ್ಸಲ್ ತುಂಡಾದರಿಂದ ಆಯತಪ್ಪಿ ರಥದ ಗೋಪುರ ಬಿದ್ದಿದೆ. ರಥದ ಮೇಲ್ಬಾಗ ಬೀಳುತ್ತಿದ್ದಂತೆ ಭಕ್ತರು ಓಡಿ ಹೋದ ಹಿನ್ನೆಲೆ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಸದ್ಯ ರಥದ ಮೇಲೆ ಟರ್ಪಾಲ್ ಹಾಕಿರುವ ದೇವಸ್ಥಾನದ ಆಡಳಿತ ಮಂಡಳಿ ಅದನ್ನು ಬದಿಯಲ್ಲಿ ತಂದು ಇರಿಸಿದೆ.
ದೇವಸ್ಥಾನದ ಆಡಳಿತ ಮಂಡಳಿ ನಿರ್ಲಕ್ಷ ಈ ಘಟನೆಯಲ್ಲಿ ಎದ್ದು ಕಾಣುತ್ತಿದೆ ಎಂದು ಆರೋಪಿಸಲಾಗಿದೆ. ಸಾವಿರಾರು ಜನರು ಸೇರಿದ್ದ ರಥೋತ್ಸವದ ವೇಳೆ ದೊಡ್ಡ ಅವಘಡ ಸಂಭವಿಸಿದರೂ ಯಾರಿಗೂ ಏನು ಆಗದ ಹಾಗೆ ದೇವಿ ಕಾಪಾಡಿದ್ದಾಳೆ ಎನ್ನುವುದು ಭಕ್ತರ ನಂಬಿಕೆ.