LATEST NEWS
ಅಡ್ಯಾರ್ ವಕ್ಫ್ ಕಾಯ್ದೆ ವಿರೋಧಿಸಿ ಪ್ರತಿಭಟನೆ – ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದವರ ಮೇಲೆ ಎಫ್ಐಆರ್

ಮಂಗಳೂರು ಎಪ್ರಿಲ್ 19: ಅಡ್ಯಾರಿನ ಷಾ ಗಾರ್ಡನ್ ನಲ್ಲಿ ನಡೆದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರ ಮನವಿ ನಡುವೆಯೂ ರಾಷ್ಟ್ರೀಯ ಹೆದ್ದಾರಿ 73ನ್ನು ಬಂದ್ ಮಾಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಮಾಡಿದ ವಿಡಿಯೋ ಆಧರಿಸಿ ಮೂವರು ಆರೋಪಿಗಳನ್ನು ಗುರುತಿಸಿದ್ದು, ಅವರ ಹೆಸರನ್ನು ಎಫ್ಐಆರ್ ನಲ್ಲಿ ನಮೂದಿಸಲಾಗಿದೆ. ಜಲೀಲ್ ಕೃಷ್ಣಾಪುರ, ಫಝಲ್ ವಳಚ್ಚಿಲ್, ಮೊಹಮ್ಮದ್ ಹನೀಫ್ ನೌಫಾಲ್ ಎಂಬವರನ್ನು ಗುರುತಿಸಿದ್ದು, ಇನ್ನಿತರ ಯುವಕರನ್ನು ವಿಡಿಯೋ ಆಧರಿಸಿ ಗುರುತು ಹಚ್ಚಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಅಡ್ಯಾರ್ ನಲ್ಲಿ ಪ್ರತಿಭಟನೆ ಸಂದರ್ಭ ಸಂಜೆ 4:30 ರ ಸುಮಾರಿಗೆ, ಪ್ರತಿಭಟನಾಕಾರರ ಗುಂಪೊಂದು ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ಹೆದ್ದಾರಿ 73 ರ ಬದಿಯಲ್ಲಿ ಮತ್ತು ಮಧ್ಯದಲ್ಲಿ ಜಮಾಯಿಸಿ, ವಾಹನಗಳ ಮುಕ್ತ ಸಂಚಾರವನ್ನು ನಿರ್ಬಂಧಿಸಿತು. ಪ್ರತಿಭಟನಾಕಾರರನ್ನು ಚದುರಿಸಲು ಮತ್ತು ಸಂಚಾರದ ಮುಕ್ತ ಸಂಚಾರಕ್ಕೆ ಅವಕಾಶ ನೀಡುವಂತೆ ಪೊಲೀಸರು ಪದೇ ಪದೇ ಮನವಿ ಮಾಡಲು ಪ್ರಯತ್ನಿಸಿದರು. ಆದರೂ ಪ್ರತಿಭಟನಾಕಾರರು ತುರ್ತುಸೇವೆಗಳಿಗೆ ಅಡ್ಡಿ ಪಡಿಸಿದ್ದಲ್ಲದೆ ಪೊಲೀಸರ ಕರ್ತವ್ಯಕ್ಕೂ ಅಡ್ಡಿ ಪಡಿಸಿದ್ದಾರೆ. ಈ ಹಿನ್ನಲೆ ಇದೀಗ ಕಂಕನಾಡಿ ನಗರ ಠಾಣೆಯಲ್ಲಿ ಸೆಕ್ಷನ್ 189(2), 126(2), 270, 324(4) 132, 285, 190 ಬಿಎನ್ಎಸ್ ಪ್ರಕಾರ ಕೇಸು ದಾಖಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ರಸ್ತೆ ತಡೆ ನಡೆಸಿದವರನ್ನು ವಿಡಿಯೋ ಆಧರಿಸಿ ಪತ್ತೆಹಚ್ಚುವ ಕಾರ್ಯ ಮಾಡಲಾಗುತ್ತಿದೆ. ತನಿಖೆ ಮುಂದುವರಿಸಿದ್ದು, ಈ ರೀತಿಯ ದುಷ್ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.