BANTWAL
ಬಂಟ್ವಾಳ ಕಲ್ಲಡ್ಕದ ಈ ಸಮಸ್ಯೆಯನ್ನು ಆಲಿಸುವರೆ ದೊರೆ..!!?

ಕಳೆದ ಒಂದು ವಾರದಿಂದ ಸುರಿಯುವ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಲ್ಲಡ್ಕದ ರಸ್ತೆಯ ಅವ್ಯವಸ್ಥೆಯನ್ನು ಹೇಳಲು ಅಸಾಧ್ಯವಾಗಿದೆ.
ಬಂಟ್ವಾಳ : ಕಳೆದ ಒಂದು ವಾರದಿಂದ ಸುರಿಯುವ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಲ್ಲಡ್ಕದ ರಸ್ತೆಯ ಅವ್ಯವಸ್ಥೆಯನ್ನು ಹೇಳಲು ಅಸಾಧ್ಯವಾಗಿದೆ.

ರಾಷ್ಟ್ರೀಯ ಹೆದ್ದಾರಿ ಬದಲು ಕೆಸರು ಗದ್ದೆಯಾಗಿದೆ. ರಸ್ತೆ ಅಂತ ಬೋರ್ಡ್ ಹಾಕಿದರೆ ಮಾತ್ರ ನೀವು ರಸ್ತೆ ಎಂದು ನಂಬಬಹುದು.
ಅಂತಹ ದುಸ್ಥಿತಿಯಲ್ಲಿರುವ ಕಲ್ಲಡ್ಕದ ಅವಸ್ಥೆಯನ್ನು ಹೇಳುವುದು ಯಾರ ಬಳಿ,ಕೇಳುವವರು ಯಾರು ? ಎಂಬ ಚಿಂತೆಯಲ್ಲಿದ್ದಾರೆ ಜನ .
ಮನೆಯ ಅಂಗಳ ತುಂಬಾ ಕೆಸರು ನೀರು, ಅಂಗಡಿ ಬಾಗಿಲು ತೆರೆದರೆ ಒಳಗೆ ನುಗ್ಗುತ್ತದೆ.
ಕೆಸರು, ನಡೆದುಕೊಂಡು ಹೋಗಲು ದಾರಿಯಿಲ್ಲ,ನೀರು ಹರಿದು ಹೋಗಲು ಚರಂಡಿಯಿಲ್ಲ,ನಿತ್ಯ ಟ್ರಾಫಿಕ್ ಜಾಮ್ ಕಲ್ಲಡ್ಕದ ಸಮಸ್ಯೆ.
ವಾಹನಗಳ ಓಡಾಟದ ಭರಾಟೆಯ ನಡುವೆ ಇಕ್ಕಟ್ಟಾದ ಸರ್ವೀಸ್ ರಸ್ತೆಯಲ್ಲಿ ಓವರ್ ಟೇಕ್ ಮಾಡುವುದರಿಂದ ಅಪಘಾತವೇ ಮೊದಲಾದ ವಿಷಯಗಳನ್ನು ಇಟ್ಟುಕೊಂಡು ಕೆಲ ದಿನಗಳ ಹಿಂದೆ ರಸ್ತೆ ದುರಸ್ತಿಗೊಳಿಸಬೇಕು, ಧೂಳಿನಿಂದ ಮುಕ್ತಿ ನೀಡಬೇಕು ಎಂದು ಆಗ್ರಹಿಸಿ ಕಲ್ಲಡ್ಕದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.
ಆಗಸ್ಟ್ ಅಂತ್ಯದೊಳಗೆ ಕಾಮಗಾರಿ ಆರಂಭಿಸಿ ಎಲ್ಲದಕ್ಕೂ ಮುಕ್ತಿ ನೀಡುತ್ತೇವೆ ಎಂದು ಗುತ್ತಿಗೆದಾರ ಕಂಪನಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಗೆ ಅಂತ್ಯ ದೊರಕಿತ್ತು.
ಆದರೆ ಇದೀಗ ಆಗಸ್ಟ್ ಮುಗಿದ್ದು ಸೆಪ್ಟೆಂಬರ್ ಅರ್ಧ ಮುಗಿದಿದೆ ಕಾಮಗಾರಿ ನಡೆಸಲು ಮಳೆ ಅಡ್ಡಿಯಾಗಿರುವುದು ಒಂದು ಸಮಸ್ಯೆಯಾದರೆ, ರಸ್ತೆಯಲ್ಲಿ ನೀರು ಹರಿದುಹೋಗಲು ಜಾಗವೇ ಇಲ್ಲದ ಕಾರಣ, ಮೂರು ನಾಲ್ಕಿಂಚು ನೀರು ನಿಲ್ಲುತ್ತದೆ.
ಇಡೀ ರಸ್ತೆ ಕೆಸರುಮಯವಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೆ ಅಪಾಯ ತಂದೊಡ್ಡಿದೆ.
ಶಾಲೆ, ಕಾಲೇಜುಗಳಿಗೆ ಬಸ್ಸಿಗಾಗಿ ಕಾಯುವವರು ನಿತ್ಯ ಸಂಕಟದೊಂದಿಗೆ ನರಕಯಾತನೆ ಅನುಭವಿಸುತ್ತಿದ್ದಾರೆ.
ಇಷ್ಟಾದರೂ ಘನಗಾತ್ರದ ವಾಹನಗಳು ವೇಗವಾಗಿ ಹೋಗುವುದನ್ನು ನಿಲ್ಲಿಸಿಲ್ಲ.
ಇದರ ಪರಿಣಾಮ, ಅವುಗಳ ಚಕ್ರದಿಂದ ಹೊರಬಿದ್ದ ಕೆಸರುಮಿಶ್ರಿತ ನೀರು ದಾರಿಯಲ್ಲಿ ನಿಂತರ ಮೇಲೆಗರುತ್ತದೆ.
ಇಂಥ ಘಟನೆಗಳು ವಾಹನ ನಿಲ್ಲಿಸಿ, ಹೋಟೆಲ್ ಗೆ ಹೋಗುವವರ ಮೇಲೆ ಆಗಿದೆ.
ಬಿಳಿ ಷರಟು, ಪಂಚೆ ಧರಿಸುವವರ ಮೈಯೆಲ್ಲಾ ಕೆಸರಾಭಿಷೇಕ ಆಗಿ ಬಣ್ಣವೇ ಬದಲಾದ ಅದೆಷ್ಟೋ ಉದಾಹರಣೆಗಳಿವೆ.
ದ್ವಿಚಕ್ರ ವಾಹನಗಳು ಈಗ ಸ್ಕಿಡ್ ಆಗಿ ಬೀಳುವುದು ಜಾಸ್ತಿಯಾಗಿದವೆ. ಇಷ್ಟೆಲ್ಲಾ ಆದರೂ ಜನರ ಸಮಸ್ಯೆಗಳಿಗೆ ಪರಿಹಾರ ಮಾಡುವ ನಿಟ್ಟಿನಲ್ಲಿ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿಯಾಗಲಿ,ಜನಪ್ರತಿನಿಧಿಯಾಗಲಿ ಅಥವಾ ಜಿಲ್ಲಾಧಿಕಾರಿಯಾಗಲಿ ಮುಂದೆ ಬರುತ್ತಿಲ್ಲ ಎಂಬ ಆರೋಪ ಕಲ್ಲಡ್ಕ ನಿವಾಸಿಗಳದ್ದು.
ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ದೂಳು ಕೆಸರಿನ ಮಧ್ಯದಲ್ಲಿ ನಲುಗಿ ಹೋಗಿರುವ ಕಲ್ಲಡ್ಕದ ಜನತೆಗೆ ತಾತ್ಕಾಲಿಕ ಪರಿಹಾರವಾದರೂ ಏನು ಎಂಬ ಪ್ರಶ್ನೆ ಉದ್ಭವವಾಗಿದೆ.
ಅಭಿವೃದ್ಧಿ ಹೆಸರಿನಲ್ಲಿ ಕಲ್ಲಡ್ಕದ ಜನತೆ ಹೈರಾಣಾಗಿದ್ದಾರೆ ಮತ್ತೊಂದು ಜೊತೆಗೆ ರೋಗದ ಭಯದಿಂದ ನಲುಗಿ ಹೋಗಿದ್ದು ಮುಕ್ತಿಗಾಗಿ ದೊರೆಯತ್ತ ನೋಡುತ್ತಿದ್ದಾರೆ.