DAKSHINA KANNADA
ಬೆಲೆ ಏರಿಕೆಯ ಬಿಸಿಯನ್ನು ದೇಶದ ಜನ ಒಪ್ಪಿಕೊಂಡಿದ್ದಾರೆ – ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್

ಪುತ್ತೂರು ಅಕ್ಟೋಬರ್ 22: ದೇಶದಲ್ಲಿ ಬೆಲೆ ಏರಿಕೆಯ ಬಿಸಿಯನ್ನು ಜನ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ನಡೆಸಿದ ಕಾರ್ಯ ಮಾದರಿಯಾಗಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವುದು ನಿಜವಾಗಿದ್ದು, ಈ ಬೆಲೆ ಏರಿಕೆ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ತಟ್ಟಿದೆ. ಈ ಬೆಲೆ ಏರಿಕೆಯ ಪರಿಣಾಮ ದೇಶದ ಮೇಲೂ ಆಗಿದೆ ಎಂದರು. ಈ ಎಲ್ಲಾ ಕಾರಣಕ್ಕಾಗಿ ಕೊರೊನಾ ಸಂದರ್ಭದಲ್ಲಿ ಪ್ರಧಾನಿ ಮಾಡಿದ ಸೇವೆಗೆ ಜನ ಬೆಲೆ ಏರಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದರು.

ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ ಎನ್ನುವ ನಂಬಿಕೆ ಜನರಲ್ಲಿದ್ದು, ಕೊರೊನಾ ಸಂದರ್ಭದಲ್ಲಿ ವೆಂಟಿಲೇಟರ್, ಆಕ್ಸಿಜನ್ ಪ್ಲಾಂಟ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಮೂಲಕ ಜನರ ಜೀವ ಉಳಿಸುವ ಕೆಲಸ ಮಾಡಿದ್ದಾರೆ. ದೇಶದ ಎಲ್ಲಾ ಜನರಿಗೂ ಉಚಿತವಾಗಿ ಲಸಿಕೆ ಸಿಗುವಂತೆ ಮಾಡಿದ್ದು, ವಿಶ್ವದ ಯಾವ ದೇಶವೂ ಮಾಡದ ಸಾಧನೆಯನ್ನು ಲಸಿಕೆ ವಿತರಣೆಯಲ್ಲಿ ದೇಶ ಮಾಡಿದೆ. ದೇಶದಲ್ಲಿ ಈಗಾಗಲೇ 100 ಕೋಟಿಗೂ ಅಧಿಕ ಲಸಿಕೆಯನ್ನು ನೀಡಲಾಗಿದೆ ಎಂದ ಅವರು ಈ ರೀತಿಯ ಕಾರ್ಯಗಳನ್ನು ದೇಶದ ಜನ ಮೆಚ್ಚಿಕೊಂಡಿದ್ದಾರೆ.