DAKSHINA KANNADA
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಇಲಾಖೆಗೆ ವಿಲೀನಗೊಳಿಸಲು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣರಿಗೆ ಸಂಸದ ಕೋಟ ಮನವಿ
ಮಂಗಳೂರು : ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಇಲಾಖೆಗೆ ವಿಲೀನಗೊಳಿಸಲು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
ಮಂಗಳೂರಿಗೆ ಆಗಮಿಸಿದ ಕೇಂದ್ರ ರೈಲ್ವೆ ಹಾಗೂ ನೀರಾವರಿ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರ ಜೊತೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಭಾಗವಹಿಸಿದರು. ಉಡುಪಿ ಮಂಗಳೂರು ರೈಲ್ವೆ ಅಭಿವೃದ್ಧಿ ಸಂಬಂಧಿಸಿದಂತೆ ಅನೇಕ ಚರ್ಚೆಗಳು ಮತ್ತು ಮಾಹಿತಿ ವಿನಿಮಯ ನಡೆಯಿತು. ಈ ಸಂದರ್ಭದಲ್ಲಿ ತಾನು ಈಗಾಗಲೇ ಮನವಿ ಮಾಡಿರುವಂತೆ ಅನೇಕ ಮನವಿಗಳನ್ನು ಸಂಸದ ಕೋಟ ಮಾನ್ಯ ಕೇಂದ್ರ ಸಚಿವರಲ್ಲಿ ಮಾಡಿದರು.
ಈಗಾಗಲೇ ನಷ್ಟದಲ್ಲಿರುವ ಕೊಂಕಣ ರೈಲ್ವೆ ವಿಭಾಗವನ್ನು ಭಾರತೀಯ ರೈಲ್ವೆ ಇಲಾಖೆಗೆ ವಿಲೀನಗೊಳಿಸಬೇಕು. ಈ ಮೂಲಕ ರೈಲು ಹೊಸ ರೈಲುಗಳ ತರುವಿಕೆ, ರೈಲು ಹಳಿಗಳ ನವೀಕರಣ, ಮತ್ತು ರೈಲ್ವೆ ನಿಲ್ದಾಣಗಳ ಮೂಲಭೂತ ಅಭಿವೃದ್ಧಿಗೆ ಸಹಕಾರವಾಗಲಿದೆ. ಈ ಕಾರ್ಯ ಆದಷ್ಟು ಬೇಗ ಆಗಬೇಕೆಂದು ಸಂಸದ ಕೋಟ ಮನವಿ ಮಾಡಿದರು.
ಈಗಾಗಲೇ ಇರುವ ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಸ್ಲೀಪಿಂಗ್ ಕೋಚ್ ಆಗಿ ಪರಿವರ್ತಿಸಿ ಆ ರೈಲನ್ನು ಮುಂಬೈಗೆ ವಿಸ್ತರಿಸಬೇಕು.
ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಸೇರಿದಂತೆ ಕೆಲವು ರೈಲುಗಳ ನಿಲುಗಡೆಗೆ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಅವಕಾಶ ನೀಡಬೇಕು ಎಂದು ಸಚಿವರಿಗೆ ಮಾಡಲಾಯಿತು.
ಈಗಾಗಲೇ ಇರುವ ಬೆಂಗಳೂರಿನಿಂದ ಹೊರಟು ಕಾರವಾರ ತಲುಪುವ ‘ಪಂಚಗಂಗಾ’ ರೈಲಿನ ಭೋಗಿಗಳನ್ನು ಹೆಚ್ಚಿಸುವುದು ಮತ್ತು ಅದೇ ಮಾದರಿಯಲ್ಲಿ ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಹೊರಡುವಂತೆ ಹೊಸ ರೈಲನ್ನು ಬಿಡುಗಡೆಗೊಳಿಸಬೇಕು. ಈಗಾಗಲೇ ರೈಲಿನಲ್ಲಿ ಮುಂಗಡ ಟಿಕೆಟ್ ಅನ್ನು ಒಂದು ತಿಂಗಳ ಮುಂಚೆಯೇ ಕಾಯ್ದಿರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಗಸ್ಟ್ 16 ಅಥವಾ 17 ರಂದು ಖುದ್ದು ಸಚಿವರಾದ ವಿ.ಸೋಮಣ್ಣರವರೇ ಉಡುಪಿ ಜಿಲ್ಲೆಗೆ ಭೇಟಿ ನೀಡಿ ರೈಲ್ವೆ ಇಲಾಖೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಿದ್ದಾರೆ ಎಂದು ಸಂಸದ ಕೋಟ ತಿಳಿಸಿದರು.