LATEST NEWS
ಅಪಾರ್ಟ್ ಮೆಂಟ್ ನಿಂದ ಕೆಳಗೆ ಬಿದ್ದ ಮಗು ರಕ್ಷಣೆ – ಮಗುವಿನ ತಾಯಿ ವಿರುದ್ದ ಸೋಶಿಯಲ್ ಮೀಡಿಯಾ ಟ್ರೋಲ್ ಮನನೊಂದು ಸಾವನಪ್ಪಿದ ಮಗುವಿನ ತಾಯಿ

ಚೆನ್ನೈ ಮೇ 20: ಕಳೆದ ವಾರ ಚೆನ್ನೈನ ಅಪಾರ್ಟ್ ಮೆಂಟ್ ನ ಬಾಲ್ಕನಿಯಿಂದ ಮಗುವೊಂದು ಕೆಳಗೆ ಬಿದ್ದು ಸ್ಥಳೀಯರು ರಕ್ಷಣೆ ಮಾಡಿದ ವಾರಗಳ ಬಳಿಕ ಮಗುವಿನ ತಾಯಿ ಸೋಶಿಯಲ್ ಮಿಡಿಯಾದಲ್ಲಿ ಕೇಳಿ ಬಂದ ಟ್ರೋಲ್ ನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಏಪ್ರಿಲ್ 28ರಂದು ಎಂಟು ತಿಂಗಳ ಪುಟ್ಟ ಮಗು ಅಪಾರ್ಟ್ಮೆಂಟ್ನ ಮೇಲ್ಛಾವಣಿಯ ಶೀಟ್ ಮೇಲೆ ನೇತಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಕ್ಕಪಕ್ಕದವರು ಮಗು ಬಿದ್ದರೆ ಬೆಡ್ಶೀಟ್ ಮೇಲೆ ಬೀಳಲಿ ಎಂದು ಕೆಳಗೆ ಬೆಡ್ಶೀಟ್ ಹಿಡಿದು ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಾಗೆಯೇ ಯಾರೂ ಮಗುವನ್ನು ರಕ್ಷಿಸುವುದರಲ್ಲಿ ಯಶಸ್ವಿಯಾಗಿದ್ದರು.
ರಕ್ಷಣೆ ಮಾಡಿದವರನ್ನು ಪ್ರಶಂಸೆ ಮಾಡಲಾಯಿತಾದರೂ ಮಗುವಿನ ತಾಯಿಯ ನಿರ್ಲಕ್ಷ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಆಕೆ ಮಗುವನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಆದರೆ ಇದು ಕೇವಲ ಒಂದು ಅಪಘಾತ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದರು. ಘಟನೆಯ ನಂತರ ರಮ್ಯಾ ತನ್ನ ಮಗುವನ್ನು ಕರಮಡೈನಲ್ಲಿರುವ ತನ್ನ ಪೋಷಕರ ಮನೆಗೆ ಕರೆದುಕೊಂಡು ಹೋಗಿದ್ದರು. ಭಾನುವಾರ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಮ್ಯಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಮಗುವಿನ ತಾಯಿಯ ಸಾವಿನ ಬಗ್ಗೆ ಗಾಯಕಿ ಚಿನ್ಮಯಿ ಶ್ರೀಪಾದ ನಟ ಪ್ರಶಾಂತ್ ರಂಗಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಘಟನೆಯಿಂದ ಅವಮಾನಗೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
