LATEST NEWS
ನೈತಿಕ ಪೊಲೀಸ್ ಗಿರಿ – ಮೂವರು ಅರೆಸ್ಟ್

ಮಂಗಳೂರು ನವೆಂಬರ್ 27:ನವೆಂಬರ್ 24 ರಂದು ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂದಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಸುರತ್ಕಲ್ ನ ಮುತ್ತು, ಪ್ರಕಾಶ್ ಮತ್ತು ಅಸೈಗೋಳಿಯ ರಾಕೇಶ್ ಎಂದು ಗುರುತಿಸಲಾಗಿದೆ.
ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ರಶೀಮ್‌ಗೆ ತಂಡವೊಂದು ನಂತೂರಿನಲ್ಲಿ ಬಸ್ ಒಳಗೆ ನುಗ್ಗಿ ಹಲ್ಲೆ ನಡೆಸಿತ್ತು. ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಒಂದೇ ಸೀಟ್‌ನಲ್ಲಿ ಸಹಪಾಠಿಯಾಗಿದ್ದ ಹಿಂದೂ ಯುವತಿ ಜತೆ ಸೈಯದ್ ರಶೀಮ್ ಉಮರ್ ಪ್ರತೀದಿನ ಪ್ರಯಾಣಿಸುತ್ತಿದ್ದ. ಈ ವಿಚಾರದಲ್ಲಿ 3-4 ಮಂದಿ ಬಸ್ಸಿನೊಳಗೆ ನುಗ್ಗಿ ಏಕಾಏಕಿಯಾಗಿ ಆತನನ್ನು ಎಳೆದು ಹಾಕಿ ಹಲ್ಲೆ ನಡೆಸಿದ್ದರು. ಅಷ್ಟರಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು ಬಂದು ಹೆಚ್ಚಿನ ಹಲ್ಲೆಯಾಗುವುದನ್ನು ತಪ್ಪಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಂಡ ಹಲ್ಲೆ ನಡೆಸಿದ್ದಲ್ಲದೆ ಬಸ್ಸಿನಿಂದ ಕೆಳಗೆ ಇಳಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೈಯದ್ ರಶೀಮ್ ಉಮರ್ ದೂರಿನಲ್ಲಿ ತಿಳಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.