DAKSHINA KANNADA
ಮೂಡುಬಿದಿರೆ: ಜಿ. ಕೆ. ಖ್ಯಾತಿಯ ಉದ್ಯಮಿ ಗಣೇಶ್ ಕಾಮತ್ ಹೃದಯಾಘಾತಕ್ಕೆ ಬಲಿ..!
ಮೂಡುಬಿದಿರೆ, ಮಾರ್ಚ್ 03: ಮೂಡುಬಿದಿರೆಯ ಜನರಿಗೆ ಜಿಕೆ ಎಂದೇ ಚಿರಪರಿಚಿತರಾಗಿರುವ ಜಿ.ಕೆ. ಎಂಟರ್‌ಪ್ರೈಸಸ್ ಮಾಲಕ ಜಿ.ಕೆ. ಖ್ಯಾತಿಯ ಗಣೇಶ್ ಕಾಮತ್ ಇಂದು ಹೃದಯಾಘಾತದಿಂದ ನಿಧನ ಹೊಂದಿದರು.
ಅವರಿಗೆ 45 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಮೂಡಬಿದಿರೆಯ ತನ್ನ ಮನೆಯಿಂದ ಉದ್ಯಮ ಮಳಿಗೆಗೆ ತೆರಳುತ್ತಿದ್ದ ವೇಳೆ ಹೃದಯಾಘಾತಕ್ಕೀಡಾದರು. ತಕ್ಷಣ ಅವರನ್ನು ಮೂಡಬಿದಿರೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲೇ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.
ವಿದ್ಯುತ್ ಅವಘಡದಿಂದಾಗಿ ತನ್ನೆರಡೂ ಕೈಗಳನ್ನು ಕಳೆದುಕೊಂಡಿದ್ದ ಗಣೇಶ್ ಕಾಮತ್ ಅವರು ಜಿ.ಕೆ. ಉದ್ಯಮವನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದರು. ಜಿ.ಕೆ. ಎಂಟರ್ ಪ್ರೈಸಸ್, ಜಿ.ಕೆ. ಗಾರ್ಡನ್, ಜಿ.ಕೆ. ಡೆಕೊರೇಟರ್ ಹೀಗೆ ಉದ್ಯಮ ಕ್ಷೇತ್ರ ವಿಸ್ತರಿಸಿದ ಗಣೇಶ್ ಕಾಮತ್ ನೂರಾರು ಮಂದಿಗೆ ಉದ್ಯೋಗದಾತರಾಗಿದ್ದರು.
ಕಾರ್ಕಳದ ಗಾಂಧಿ ಮೈದಾನದಲ್ಲಿ ಹಗಲು-ರಾತ್ರಿ ಕ್ರಿಕೆಟ್ ಪಂದ್ಯಾಟಕ್ಕಾಗಿ ಲೈಟಿಂಗ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿ ತನ್ನೆರಡು ಕೈಗಳನ್ನು ಕಳೆದುಕೊಂಡರೂ ಧೃತಿಗೆಡದೆ ತನ್ನದೇ ಆದ ಜಿ.ಕೆ. ಎಂಟರ್‌ಪ್ರೈಸಸ್ ಉದ್ಯಮವನ್ನು ಪ್ರಾರಂಭಿಸಿದ್ದರು.
ಅವರ ವಿಶೇಷ ಸಾಧನೆಯನ್ನು ಪರಿಗಣಿಸಿ 2017 ರಲ್ಲಿ ಮಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿತ್ತು. ಮೃತರು ತಾಯಿ, ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
You must be logged in to post a comment Login