DAKSHINA KANNADA
ಮೂಡುಬಿದಿರೆ ನೈತಿಕ ಪೊಲೀಸ್ಗಿರಿ ಪ್ರಕರಣ – ಮೂವರು ಆರೋಪಿಗಳ ಬಂಧನ..!
ಮೂಡುಬಿದಿರೆಯಲ್ಲಿ ನೈತಿಕ ಪೊಲೀಸ್ಗಿರಿ(moral policing) ನಡೆಸಿದ ಮೂವರು ಆರೋಪಿಗಳನ್ನು ಮೂಡುಬಿದಿರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು : ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಸೋಮವಾರ ರಾತ್ರಿ ನಡೆದ ನೈತಿಕ ಪೊಲೀಸ್ಗಿರಿ(moral policing) ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮೂಡುಬಿದಿರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಹಪಾಠಿ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮೂವರು ಯುವಕರ ಗುಂಪು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ವಿದ್ಯಾರ್ಥಿಯೊಬ್ಬ ದೂರು ನೀಡಿದ್ದ. ಮೂಡುಬಿದಿರೆ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಬಳಿ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಕಾರಣಕ್ಕೆ ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿತ್ತು.
ಬಂಧಿತ ಮೂವರು ಸಂಘಟನೆಯೊಂದಕ್ಕೆ ಸೇರಿದವರಾಗಿದ್ದು, ಇನ್ನೂ ಕೆಲ ಮಂದಿ ಇದ್ದಾರೆ ಎನ್ನಲಾಗಿದೆ.
ಸೋಮವಾರ ರಾತ್ರಿ ಮೂಡಬಿದಿರೆಯ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಎದುರು ತನ್ನೂರು ಬೆಂಗಳೂರಿಗೆ ಹೋಗಲು ಬಸ್ಗೆ ಕಾಯುತ್ತಿದ್ದ ವಿದ್ಯಾರ್ಥಿನಿಯನ್ನು ಆಕೆಯ ಸಹಪಾಠಿ ವಿದ್ಯಾರ್ಥಿ ಮಾತನಾಡಿಸಿದ್ದ.
ಇಬ್ಬರೂ ಮೂಡುಬಿದಿರೆಯ ಒಂದೇ ಕಾಲೇಜಿನ ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ.
ಬಸ್ ಬಂದ ಬಳಿಕ ವಿದ್ಯಾರ್ಥಿನಿ ಹತ್ತಿಕೊಂಡು ಹೋಗಿದ್ದಾಳೆ. ಆದರೆ, ಅಲ್ಲೇ ಇದ್ದ ಆರೋಪಿಗಳು ಮಾತನಾಡಿಸಿದ ವಿದ್ಯಾರ್ಥಿಯು ಬೇರೆ ಸಮುದಾಯದವ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.