Connect with us

DAKSHINA KANNADA

ಮೂಡುಬಿದಿರೆ: ಖ್ಯಾತ ಕೃಷಿ ತಜ್ಞ ಡಾ.ಎಲ್.ಸಿ ಸೋನ್ಸ್ ಇನ್ನಿಲ್ಲ

ಮೂಡುಬಿದಿರೆ, ಎಪ್ರಿಲ್ 05: ಕೃಷಿ ತಜ್ಞ, ‘ಕೃಷಿ ಋಷಿ’ ಎಂದೇ ಗುರುತಿಸಿಕೊಂಡಿದ್ದ ಮೂಡುಬಿದಿರೆ ಬನ್ನಡ್ಕದ ಸೋನ್ಸ್ ಫಾರ್ಮ್‍ನ ಪ್ರಗತಿಪರ ಕೃಷಿಕ ಡಾ.ಎಲ್.ಸಿ ಸೋನ್ಸ್(89) ಇಂದು (ಬುಧವಾರ) ಬೆಳಗ್ಗೆ ನಿಧನರಾದರು.

ಡಾ. ಎಲ್.ಸಿ . ಸೋನ್ಸ್ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹಾಗೂ ತನ್ನೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡ ಸಹೋದರ ಐ.ವಿ. ಸೋನ್ಸ್ ಇವರನ್ನು ಅಗಲಿದ್ದಾರೆ.

ಕೃಷಿ ಋಷಿ: 1934 ಎಪ್ರಿಲ್ 4ರಂದು ಜನಿಸಿರುವ ಡಾ.ಲಿವಿಂಗ್ ಸ್ಟನ್ ಚಂದ್ರಮೋಹನ ಸೋನ್ಸ್ ಮಂಗಳವಾರವಷ್ಟೇ 89 ವರ್ಷ ತುಂಬಿ 90ಕ್ಕೆ ಕಾಲಿರಿಸಿದ್ದರು. ಡಾ.ಎಲ್.ಸಿ ಸೋನ್ಸ್ ತನ್ನ ಜೀವನವನ್ನು ಕೃಷಿಗಾಗಿ ಮುಡಿಪಾಗಿಟ್ಟವರು. ಕೃಷಿ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಸೋನ್ಸ್ ಅನಾನಸು ಕೃಷಿ, ಬಿದಿರಿನ ವಿವಿಧ ಪ್ರಭೇದ, ದೇಶ-ವಿದೇಶಗಳ ಹಣ್ಣು-ತರಕಾರಿ ಪ್ರಭೇದಗಳನ್ನು ಮೂಡುಬಿದಿರೆ ಬನ್ನಡ್ಕದ ಮಣ್ಣಿನಲ್ಲಿ ಬೆಳೆಸಿ, ಅದರಿಂದ ಫಸಲು ಹಾಗೂ ಲಾಭ ಗಳಿಸಿದವರಾಗಿದ್ದಾರೆ. ಜಲ ತಜ್ಞರಾಗಿಯೂ ವಿಶೇಷ ಪರಿಣಿತಿಯನ್ನು ಹೊಂದಿದ್ದರು.

ಕೃಷಿಯ ಜೊತೆಗೆ ಸಾಮಾಜಿಕವಾಗಿಯು ಗುರುತಿಸಿಕೊಂಡಿರುವ ಸೋನ್ಸ್ ಅವರು ಹಲವಾರು ಸಂಘಸಂಸ್ಥೆಗಳ ಸಕ್ರಿಯ ಪದಾಧಿಕಾರಿ. ಅಮೆರಿಕನ್ ಸೊಸೈಟಿ ಆಫ್ ಡೌಸರ್ ಸದಸ್ಯ, ಬ್ರಿಟಿಸ್ ಸೊಸೈಟಿ ಆಫ್ ಡೌಸರ್ ಅಜೀವ ಸದಸ್ಯರಾಗಿದ್ದರು.

ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮದ ಸಲಹೆಗಾರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀಮಹಾವೀರ ವಿಧ್ಯಾವರ್ಧಕ ಸಂಘ, ಶ್ರೀಮಹಾವೀರ ಕಾಲೇಜು ಆಡಳಿತ ಮಂಡಳಿ ಸದಸ್ಯರಾಗಿ, ರೋಟರಿ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಸಮಾಜಮಂದಿರ ಸಭಾದ ಮಾಜಿ ಅಧ್ಯಕ್ಷರಾಗಿ ಪ್ರಸ್ತುತ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಕೃಷಿ ವಿಚಾರ ವಿನಿಮಯ ಕೇಂದ್ರದಲ್ಲೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೃಷಿ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಆಲ್ಫ್ರೆಡ್ ಸೋನ್ಸ್ ಫೌಂಡೇಶನ್ ಸ್ಥಾಪಿಸಿದ್ದಾರೆ.

ಬೆಂಗಳೂರು ಕೃಷಿ ವಿ.ವಿಯಿಂದ ಉತ್ತಮ ತೋಟಗಾರಿಕಾ ಸಾಧಕ ಪ್ರಶಸ್ತಿ, ಅಮೆರಿಕ ಮೊಟಾನಾ ವಿ.ವಿಯಿಂದ ವಿಶೇಷ ಹಳೆ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದು, ಅಮೇರಿಕದ ಹಳೆ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಅನ್ಯ ದೇಶದಿಂದ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಡಾ. ಎಲ್.ಸಿ . ಸೋನ್ಸ್.

2006 ಸಾಧಕ ಪ್ರಶಸ್ತಿ, 2004 ದ.ಕ. ಜಿಲ್ಲಾ ರಾಜ್ಯೋತ್ಸವ, ಹಿರಿಯಡ್ಕದ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದಿಂದ ಬೆಸ್ಟ್ ಫಾರ್ಮರ್ ಪ್ರಶಸ್ತಿ, 2010-ಬಾಗಲಕೋಟೆ ತೋಟಗಾರಿಕಾ ವಿ.ವಿ.ಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಸನ್ಮಾನ ಸಹಿತ ದೇಶ ವಿದೇಶಗಳ ಹಲವಾರು ಸಂಘ ಸಂಸ್ಥೆಗಳು ಸೋನ್ಸ್ ಅವರ ಸಾಧನೆಯನ್ನು ಗೌರವಿಸಿದೆ. ಇಸ್ರೆಲ್‍ನಲ್ಲಿ ನಡೆದ ವಿಶ್ವ ನೀರಾವರಿ ಸಮ್ಮೇಳನಕ್ಕೆ ಭಾಗವಹಿಸಿ, ಅವುಗಳ ಮಾದರಿಯನ್ನು ತನ್ನೂರಿನಲ್ಲಿ ಪ್ರಯೋಗಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *