LATEST NEWS
ಕೇರಳಕ್ಕೆ ಇನ್ನೂ ಬಾರದ ಮುಂಗಾರು… ಈ ಬಾರಿ ಕರ್ನಾಟಕಕ್ಕೆ ವಿಳಂಬ ಸಾಧ್ಯತೆ….!!
ಮಂಗಳೂರು ಜೂನ್ 05: ಮುಂಗಾರು ಮಳೆ ಈ ಬಾರಿ ನೀರಿಕ್ಷೆಗಳನ್ನು ತಲೆ ಕೆಳಗೆ ಮಾಡಿದ್ದು, ಭಾರತೀಯ ಹವಾಮಾನ ಇಲಾಖೆ ಮುಂಗಾರು ಪ್ರವೇಶದ ಬಗ್ಗೆ ನೀಡಿದ್ದ ದಿನಾಂಕ ಇದೀಗ ಮುಂದಕ್ಕೆ ಹೊದಂತಿದೆ. ಈ ಬಾರಿ ನಿರೀಕ್ಷೆಯ ಪ್ರಕಾರ ಮುಂಗಾರು ಪ್ರವೇಶ ಕೇರಳಕ್ಕೆ ನಿಧಾನವಾಗುತ್ತಿದೆ.
ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 4ರ ಬಳಿಕ ಆಗಬಹುದು ಎಂದು ಐಎಂಡಿ ಮೊದಲು ವರದಿ ನೀಡಿತ್ತು. ಆದರೆ ಈ ಬಳಿಕ ಇದು ಜೂನ್ 7ರಿಂದ 8ರೊಳಗೆ ಆಗುವ ಸಾಧ್ಯತೆಗಳು ಇದೆ ಎನ್ನುವ ಅಂದಾಜು ವರದಿಯನ್ನು ನೀಡಿತು. ಈಗ ಜೂನ್ 5ರಿಂದ ಕೇರಳದ ಮುಂಗಾರು ಪ್ರವೇಶದ ಕುರಿತು ಮತ್ತಷ್ಟು ಅಧ್ಯಯನಕ್ಕೆ ಇಳಿಯಲು ಪ್ರಯತ್ನ ಸಾಗುತ್ತಿದೆ. ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 8ಕ್ಕೆ ಆದರೆ ಈ ಬಳಿಕ ರಾಜ್ಯದ ಕರಾವಳಿಗೆ ಜೂನ್ 10ರಿಂದ 12ರೊಳಗೆ ಪ್ರವೇಶ ಪಡೆಯಲಿದೆ ಎನ್ನುವುದು ಹವಾಮಾನ ಇಲಾಖೆಯ ಲೆಕ್ಕಚಾರ.
ಐಎಂಡಿಯ ಪ್ರಕಾರ ಕೇರಳದಲ್ಲಿ ಎರಡು ದಿನಗಳ ಕಾಲ 2.5 ಮಿ.ಮೀ ಮಳೆಯಾಗಬೇಕು. ವಿಶೇಷವಾಗಿ ಲಕ್ಷದ್ವೀಪ, ಕೇರಳ ಹಾಗೂ ಮಂಗಳೂರಿನ 14 ಮಳೆ ನಿಲ್ದಾಣಗಳಲ್ಲಿ 9 ನಿಲ್ದಾಣಗಳಲ್ಲಿ 2.5 ಮಿ.ಮೀ ಮಳೆ ಎರಡು ದಿನ ಬಂದರೆ ಮೂರನೇ ದಿನದಂದು ಮುಂಗಾರು ಪ್ರವೇಶವಾಗಿದೆ ಎನ್ನುವ ಮಾಹಿತಿಯನ್ನು ಐಎಂಡಿ ಬಿಡುಗಡೆ ಮಾಡುತ್ತದೆ. ಕೇರಳದ ಮುಂಗಾರಿನ ಆರಂಭದ ವೇಗವನ್ನು ನಿರ್ಧಾರ ಮಾಡಿಕೊಂಡು ಕರ್ನಾಟಕದಲ್ಲಿ ಮುಂಗಾರು ಯಾವ ರೀತಿಯಲ್ಲಿ ಆಟ ಮುಂದುವರಿಸುತ್ತದೆ ಎನ್ನುವ ಲೆಕ್ಕವನ್ನು ಐಎಂಡಿ ಮುಂದೆ ಇಡುತ್ತದೆ ಎನ್ನುತ್ತಾರೆ ಐಎಂಡಿಯ ಹಿರಿಯ ಅಧಿಕಾರಿಗಳು.