LATEST NEWS
ಮುಂದಿನ ನಾಲ್ಕೈದು ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶ – ಹವಮಾನ ಇಲಾಖೆ

ನವದೆಹಲಿ ಮೇ 20: 2009ರ ನಂತರ ಇದೇ ಮೊದಲ ಬಾರಿಗೆ ಮುಂಗಾರು ಮಳೆ ಕೇರಳಕ್ಕೆ ವಾಡಿಕೆಗಿಂತ ಮುಂಚಿತವಾಗಿಯೇ ಪ್ರವೇಶ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.
ಈ ಮೊದಲು ಕೇರಳಕ್ಕೆ ಮುಂಗಾರು ಮಳೆ ಮೇ 27ರ ವೇಳೆಗೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಿತ್ತು. ಇದೀಗ ಮುಂಗಾರು ಪೂರ್ವ ಮಳೆಯ ಅಬ್ಬರದ ಜೊತೆಗೆ ಮುಂಗಾರು ಪ್ರವೇಶವಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಜೂನ್ 1ರ ವೇಳೆಗೆ ಕೇರಳಕ್ಕೆ ಪ್ರವೇಶಿಸುತ್ತದೆ. ಒಂದು ವೇಳೆ ನಿರೀಕ್ಷೆಯಂತೆ ಈ ಬಾರಿ ನಾಲೈದು ದಿನಗಳಲ್ಲಿ ಮುಂಗಾರು ಪ್ರವೇಶಿಸಿದರೆ, 2009ರ ನಂತರ ಭಾರತದ ಮುಖ್ಯ ಭೂಭಾಗದಲ್ಲಿ ವಾಡಿಕೆಗಿಂತ ಮುಂಚಿತವಾಗಿ ಮುಂಗಾರು ಆರಂಭವಾಗುತ್ತಿರುವುದು ಇದೇ ಮೊದಲು ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳಕ್ಕೆ ಮುಂಗಾರು ಪ್ರವೇಶಿಸಿದ 24 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗುವ ಸಾಧ್ಯತೆ ಇದೆ. ಈಗಾಗಲೇ ಮುಂಗಾರು ಪೂರ್ವ ಮಳೆ ಕರ್ನಾಟಕದಲ್ಲಿ ಅಬ್ಬರಿಸುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.