LATEST NEWS
ಮೂಕ ಪ್ರಾಣಿಗಳ ಮಾರಣಹೋಮ
ಉಡುಪಿ ಸೆಪ್ಟೆಂಬರ್ 7: ಉಡುಪಿಯಲ್ಲಿ ಎರಡು ಗೋಣಿಗಳಲ್ಲಿ ಮಂಗಗಳ ಮೃತದೇಹ ಪತ್ತೆಯಾಗಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕಾಡಿನಲ್ಲಿ ತುಂಬಿರುವ ಎರಡು ಸೆಣಬಿನ ಗೋಣಿ ಎಸೆದು ಹೋಗಿದ್ದರು. ಇದನ್ನು ಕಂಡ ಸ್ಥಳೀಯರು ತೆರೆದು ನೋಡಿದಾಗ ಹಲವಾರು ಮಂಗಗಳ ಮೃತದೇಹಗಳು ಕಾಣಿಸಿಕೊಂಡಿದೆ.
ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತೋಟಕ್ಕೆ ಬಂದು ಉಪಟಳ ನೀಡುತ್ತಿದ್ದ ಮಂಗಗಳಿಗೆ ವಿಷವಿಟ್ಟು ಕೊಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಆಗುಂಬೆ ಘಾಟಿ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಂಗಗಳು ಕಾಣಿಸಿಕೊಳ್ಳುತ್ತವೆ. ಸುತ್ತಮುತ್ತ ತೋಟಗಳಿಗೆ ಮಂಗಗಳು ಬರುವುದು ಸಾಮಾನ್ಯ. ರೈತರಿಗೆ ಉಪಟಳ ಜಾಸ್ತಿಯಾದಾಗ ವಿಷವಿಟ್ಟು ಮಂಗಗಳನ್ನು ಕೊಂದಿರುವ ಸಾಧ್ಯತೆ ಇದೆ.
ಕಳೆದ ವರ್ಷ ಕೂಡ ನೂರಾರು ಸಂಖ್ಯೆಗಳಲ್ಲಿ ಕೋತಿಗಳ ಮಾರಣಹೋಮ ನಡೆದಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ದುಷ್ಕೃತ್ಯ ಎಸಗಿ ನಾಡ್ಪಾಲು ಸಮೀಪ ಬಿಸಾಕಿ ಹೋಗಿದ್ದಾರೆ ಎನ್ನಲಾಗಿದೆ. ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಕಪ್ರಾಣಿಗಳ ಮೇಲೆ ಮೃಗೀಯ ವರ್ತನೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.