LATEST NEWS
ತಪ್ಪಿದ ಕೈ ಟಿಕೆಟ್ ಜೆಡಿಎಸ್ ನಿಂದ ಮೊಹಿಯುದ್ದೀನ್ ಬಾವ ಕಣಕ್ಕೆ

ಮಂಗಳೂರು ಎಪ್ರಿಲ್ 20: ಕೊನೆಗೂ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಇನಾಯತ್ ಅಲಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ನಡುವೆ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಮೊಹಿಯುದ್ದೀನ್ ಬಾವ ಜೆಡಿಎಸ್ನಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೆಟ್ ಗಾಗಿ ಮೊಹಿಯುದ್ದೀನ್ ಬಾವ ಹಾಗೂ ಇನಾಯತ್ ಆಲಿ ವಿರುದ್ದ ಪೈಪೋಟಿ ಎರ್ಪಟ್ಟಿತ್ತು, ಕಾಂಗ್ರೇಸ್ ನ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದರೂ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಆಗಿರಲಿಲ್ಲ. ನಿನ್ನೆ ಕೊನೆಯ ಕ್ಷಣದಲ್ಲಿ ಟಿಕೆಟ್ ಇನಾಯತ್ ಆಲಿ ಅವರ ಪಾಲಾಗಿದೆ.

ಇನ್ನು ಟಿಕೆಟ್ ಕೈತಪ್ಪಿದರೆ ಬಾವ ಜೆಡಿಎಸ್ ಸೇರುವ ಮುನ್ಸೂಚನೆ ಸಿಕ್ಕಿದ್ಸರಿಂದ ಕಾಂಗ್ರೆಸ್ ವರಿಷ್ಠರು ಬುಧವಾರ ಮಧ್ಯರಾತ್ರಿವರೆಗೂ ಈ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಪ್ರಕಟಿಸಿರಲಿಲ್ಲ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಮುಂಜಾನೆ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಇನಾಯತ್ ಅಲಿ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಬಗ್ಗೆ ಮೊದಲೇ ಸುಳಿವು ಸಿಕ್ಕಿದ್ದರಿಂದ ಮೊಹಿಯುದ್ದೀನ್ ಬಾವ ಅವರು ಜೆಡಿಎಸ್ ಬಾಗಿಲು ತಟ್ಟಿದ್ದಾರೆ. ಬಾವ ಅವರು ಮಂಗಳೂರು ಉತ್ತರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಾವಾ ‘ಕಾಂಗ್ರೆಸ್ ಪಕ್ಷವು ನನ್ನನ್ನು ಬಳಸಿ ಬೆನ್ನಿಗೆ ಚೂರಿ ಹಾಕಿದೆ. ಚೊಕ್ಕಬೆಟ್ಟುವಿನ ಮನೆಯ ವಠಾರದಲ್ಲಿ ಗುರುವಾರ ಬೆಳಿಗ್ಗೆ 11ಕ್ಕೆ ಅಭಿಮಾನಿಗಳ ಸಭೆ ಕರೆದಿದ್ದೇನೆ. ಕ್ಷೇತ್ರದಲ್ಲಿ ಪಕ್ಷದ ಶೇ 78ರಷ್ಟು ಕಾರ್ಯಕರ್ತರು ನನ್ನನ್ನೇ ಅಭ್ಯರ್ಥಿ ಯನ್ನಾಗಿಸಬೇಕು ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯ ನೀಡಿದ್ದರು. ಶೇ 7ರಷ್ಟು ಕಾರ್ಯಕರ್ತರಿಂದ ಮಾತ್ರ ಬೆಂಬಲ ಪಡೆದ ವ್ಯಕ್ತಿಗೆ ದುಡ್ಡಿನಾಸೆಗಾಗಿ ಟಿಕೆಟ್ ನೀಡಿದ್ದಾರೆ. ಪಕ್ಷಕ್ಕಾಗಿ ದುಡಿದ ನಾನು ಈ ರಂಜಾನ್ ಉಪವಾಸದ ಸಂದರ್ಭದಲ್ಲೂ ಒಂದು ತಿಂಗಳು ನಾಯಕರ ಮನೆಗಳಿಗೆ ಅಲೆದು ಬೇಡುವ ಸ್ಥಿತಿಯನ್ನು ನಿರ್ಮಿಸಿದರು. ನನಗೆ ಬಿಫಾರ್ಮ್ ನೀಡಬೇಕು ಎಂದು ಎರಡು ಸಲ ತೀರ್ಮಾನವಾಗಿದ್ದರೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಟಿಕೆಟ್ ತಪ್ಪಿಸಿದರು’ ಎಂದು ಮೊಹಿಯುದ್ದೀನ್ ಬಾವ ಅವರು ಆರೋಪಿಸಿದ್ದಾರೆ. ಈ ಕುರಿತ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.