LATEST NEWS
ಇನಾಯತ್ ಗೆದ್ದರೆ ಫಲಿತಾಂಶ ದಿನವೇ ನನ್ನ ತಲೆ ಕೊಡಲು ಸಿದ್ಧ – ಮೊಯ್ದೀನ್ ಬಾವ
ಮಂಗಳೂರು ಎಪ್ರಿಲ್ 20: ಕುತೂಹಲಕ್ಕೆ ಕಾರಣವಾಗಿದ್ದ ಮಂಗಳೂರು ಉತ್ತರ ಟಿಕೆಟ್ ಘೋಷಣೆಯಾಗಿದ್ದು, ಇನಾಯತ್ ಆಲಿ ಮಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಯಾಗಿದ್ದ ಮೊಯ್ದೀನ್ ಬಾವ ಬಂಡಾಯ ಎದ್ದಿದ್ದಾರೆ. ತನ್ನ ಟಿಕೆಟ್ ತಪ್ಪಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರೇ ಕಾರಣ ಎಂದು ಬಾವ ಕಿಡಿಕಾರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಮಂಗಳೂರು ಉತ್ತರ ಕ್ಷೇತ್ರದ ಸೀಟನ್ನು ಹಣಕ್ಕಾಗಿ ಮಾರಾಟ ಮಾಡಿದ್ದಾರೆ. ರಾಹುಲ್ ಗಾಂಧಿ ನಡೆಸಿದ ಪಕ್ಷದ ಸರ್ವೆಯಲ್ಲಿ 78 ಶೇ. ಮತಗಳು ನನ್ನ ಪರವಾಗಿ ಬಂದಿದ್ದವು. ಇನಾಯತ್ ಆಲಿಗೆ ಕೇವಲ 7 ಶೇ. ಮತ ಸಿಕ್ಕಿದ್ದವು. ಈ ಇನಾಯತ್ ಆಲಿ ಯಾರೆಂದೇ ಕ್ಷೇತ್ರದಲ್ಲಿ ಜನರಿಗೆ ತಿಳಿದಿಲ್ಲ. ಡಿಸಿಸಿ ಕಚೇರಿಗೆ ಇವರು ಹೋಗಿದ್ದಾರೆಯೇ.. ಕೇವಲ ತನ್ನ ವ್ಯವಹಾರ ಪಾಲುದಾರ ಎಂಬ ನೆಪದಲ್ಲಿ ಡಿಕೆಶಿ ಟಿಕೆಟ್ ಮಾರಿದ್ದಾರೆ.
ನನ್ನ ಟಿಕೆಟ್ ತಪ್ಪಿಸಿದ್ದು ಡಿಕೆ ಶಿವಕುಮಾರ್ ಅವರೇ, ಖಚಿತವಾಗಿ ಹೇಳುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಗಿಸಲು ಡಿಕೆಶಿ ಹೊರಟಿದ್ದಾರೆ. ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಸೋಲಿಸಲು ಡಿಕೆಶಿ ಟಿಕೆಟ್ ಕೊಟ್ಟಿದ್ದಾರೆ. ನಾನು ಮಂಗಳೂರು ಉತ್ತರ ಕ್ಷೇತ್ರದಲ್ಲಿಯೇ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇಲ್ಲಿ ಹಣಕ್ಕಾಗಿ ಓಟು ಮಾರುವ ಜನ ಇಲ್ಲ. ಹಣ ಖರ್ಚು ಮಾಡಲಿ. ಇಲ್ಲಿ ಇನಾಯತ್ ಗೆದ್ದರೆ ಫಲಿತಾಂಶ ದಿನವೇ ನನ್ನ ತಲೆ ಕೊಡಲು ಸಿದ್ಧನಿದ್ದೇನೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ಸವಾಲು ಹಾಕಿದ್ದಾರೆ.