LATEST NEWS
ಮೊಬೈಲ್ ನೆಟ್ ವರ್ಕ್ ಸಮಸ್ಯೆ ಸರಿಪಡಿಸಲು ಸಂಸದ ನಳಿನ್ ಕುಮಾರ್ ಸೂಚನೆ
ಮಂಗಳೂರು, ಜೂನ್ 2:- ಜಿಲ್ಲೆಯ ಜನವಸತಿ ಪ್ರದೇಶಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸೌಲಭ್ಯ ಒದಗಿಸುವುದರೊಂದಿಗೆ ಮೊಬೈಲ್ ಸೇವಾ ಪೂರೈಕೆದಾರರು ಉತ್ತಮ ಸೇವೆಯನ್ನು ಒದಗಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದರು.
ಮಂಗಳೂರಿನ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಕುರಿತ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಸರ್ಕಾರದ ಅನೇಕ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಜನಸಾಮಾನ್ಯರ ದೈನಂದಿನ ದೂರವಾಣಿ ಸೌಲಭ್ಯವನ್ನು ಉಪಯೋಗಿಸಲು ತೊಂದರೆ ಉಂಟಾಗುತ್ತಿದೆ. ಹೀಗಾಗದಂತೆ ಎಲ್ಲಾ ಮೊಬೈಲ್ ನೆಟ್‍ವರ್ಕಿಂಗ್ ಕಂಪೆನಿಗಳು ಎಚ್ಚರ ವಹಿಸುವುದರೊಂದಿಗೆ ಉತ್ತಮ ಸೇವೆಯನ್ನು ಒದಗಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.
ನೆಟ್‍ವರ್ಕ್ ಸಮಸ್ಯೆಯಿಂದಾಗಿ ಕೋವಿಡ್ ಸೋಂಕಿತರಿಗೆ ಮೆಡಿಕಲ್ ಟ್ರೀಟ್‍ಮೆಂಟ್ ಕೊಡಲು ಪಡಿತರ ವಿತರಣೆ, ಜಿ.ಪಿ.ಎಸ್ ಆಧಾರದ ಮೇಲೆ ಗೃಹ ನಿರ್ಮಾಣದ ಅನುದಾನ ನೀಡಲು ಸೇರಿದಂತೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಕಳೆದ ವರ್ಷ ಕೊರೋನಾದಿಂದ ಶಾಲಾ –ಕಾಲೇಜುಗಳು ಪ್ರಾರಂಭವಾಗದಿದ್ದರೂ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಇದರಿಂದ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ವರ್ಕ್‍ಫ್ರಮ್ ಹೋಮ್‍ನಡಿ ಕಾರ್ಯನಿರ್ವಹಿಸುತ್ತಿರುವವರಿಗೆ ನೆಟ್‍ವರ್ಕ್ ಸಮಸ್ಯೆ ಉಂಟಾಗಿ ಎತ್ತರ ಪ್ರದೇಶಗಳನ್ನು ಹುಡುಕಿಕೊಂಡು ಹೋಗುವಂತ ಪರಿಸ್ಥಿತಿ ಉಂಟಾಗಿದೆ ಎಂದರು.
ಸರ್ಕಾರ ಸ್ವಾಮ್ಯದ ಬಿ.ಎಸ್.ಎನ್.ಎಲ್ ಮುಂಚೂಣಿ ಟೆಲಿ ಕಂಪೆನಿಯಾಗಿದ್ದರೂ ಸಹ ಜಿಲ್ಲೆಯಲ್ಲಿನ ಗ್ರಾಹಕರುಗಳಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲು ಯೋಜನೆಯನ್ನು ರೂಪಿಸುವುದರೊಂದಿಗೆ ಉತ್ತಮ ನೆಟ್‍ವರ್ಕ್ ಸೌಲಭ್ಯವನ್ನು ಒದಗಿಸಬೇಕು ಎಂದರು.