DAKSHINA KANNADA
ಪ್ರತಿಭಟನೆಯ ವೇಳೆ ಎತ್ತಿನಗಾಡಿ ಹತ್ತಲು ಹೋಗಿ ನಗೆಪಾಟಲಿಗೀಡಾದ ಐವನ್ ಡಿಸೋಜಾ
ಪ್ರತಿಭಟನೆಯ ವೇಳೆ ಎತ್ತಿನಗಾಡಿ ಹತ್ತಲು ಹೋಗಿ ನಗೆಪಾಟಲಿಗೀಡಾದ ಐವನ್ ಡಿಸೋಜಾ
ಮಂಗಳೂರು, ಸೆಪ್ಟಂಬರ್ 10 : ಕಾಂಗ್ರೇಸ್ ಪಕ್ಷ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಇಂದು ಕರೆ ನೀಡಿದ್ದ ಭಾರತ್ ಬಂದ್ ಹಲವು ಕಡೆಗಳಲ್ಲಿ ಗೊಂದಲ ಹಾಗೂ ಘರ್ಷಣೆಗೆ ಕಾರಣವಾಗಿದೆ.
ಬಂದ್ ನ ಹೆಸರಿನಲ್ಲಿ ಕೆಲವು ಕಡೆಗಳಲ್ಲಿ ಕಾರ್ಯಕರ್ತರು ಪಂಡಾಟ ನಡೆಸಿದರೆ, ಇನ್ನೊಂದು ಕಡೆಗಳಲ್ಲಿ ಪ್ರಚಾರದ ಗೀಳಿಗೋಸ್ಕರ ಏನಿಲ್ಲದ ಕಸರತ್ತನ್ನೂ ನಡೆಸಿದ್ದಾರೆ.
ಪ್ರತಿಭಟನೆ ಕೊಂಚ ಡಿಫರೆಂಟ್ ಆಗಿದ್ದರೆ, ಎಲ್ಲರೂ ತಮ್ಮತ್ತ ಆಕರ್ಷತರಾಗುತ್ತಾರೆ ಎನ್ನುವ ಯೋಚನೆಯಿಂದ ಇಂಥ ಪ್ರಯತ್ನಕ್ಕೆ ಕೆಲವರು ಕೈ ಹಾಕೋದು ಸಹಜ.
ಇದೇ ರೀತಿಯ ಪ್ರತಿಭಟನೆಗೆ ಮುಂದಾದ ಮುಖಂಡರೊಬ್ಬರು ಪೇಚಿಗೆ ಸಿಲುಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಅವರ ಆಪ್ತರು ಎತ್ತಿನಗಾಡಿಯೊಂದನ್ನು ಸಿದ್ಧಪಡಿಸಿದ್ದರು.
ಎತ್ತಿನ ಗಾಡಿಯಲ್ಲಿ ಗ್ಯಾಸ್ ಸಿಲಿಂಡರ್ ಗಳು, ಗಾಡಿಯ ಸುತ್ತ ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರ ಫೋಟೋ ಎಲ್ಲವನ್ನೂ ಅಂಟಿಸಿ ಶೃಂಗಾರ ಮಾಡಲಾಗಿತ್ತು.
ಹಂಪನ್ ಕಟ್ಟೆಗೆ ಶೃಂಗಾರಗೊಂಡು ಬಂದ ಎತ್ತಿನ ಗಾಡಿಯಲ್ಲಿ ಐವನ್ ಡಿಸೋಜಾ ಮೆರವಣಿಗೆಯಲ್ಲಿ ತೆರಳುವುದು ಎನ್ನುವ ಪ್ಲಾನ್ ಕೂಡಾ ರೆಡಿಯಾಗಿತ್ತು.
ಆದರೆ ಎತ್ತಿನಗಾಡಿಗೆ ಕಟ್ಟಿದ ಎತ್ತುಗಳು ಮಾತ್ರ ಕಾಂಗ್ರೇಸ್ ಕಾರ್ಯಕರ್ತರ ಎಲ್ಲಾ ಪ್ಲಾನನ್ನೂ ಫ್ಲಾಫ್ ಮಾಡಿ ಬಿಟ್ಟಿದೆ.
ಎತ್ತಿನಗಾಡಿಯನ್ನು ಏರಲು ಸಿದ್ಧವಾದ ಐವನ್ ಡಿಸೋಜಾರಿಗೆ ಎತ್ತುಗಳು ಗಾಡಿಯನ್ನು ಏರಲು ಅವಕಾಶವನ್ನೇ ನೀಡಿಲ್ಲ.
ಗಾಡಿಯನ್ನು ಏರಲು ಯತ್ನ ನಡೆಸಿದ ಐವನ್ ಡಿಸೋಜಾ ಇನ್ನು ಪ್ರಯತ್ನಿಸಿದರೆ ಗಾಡಿಯಿಂದ ಬಿದ್ದು ನಗೆಪಾಟಲಿಗೀಡಾಗುವುದಾಗುವುದು ಗ್ಯಾರಂಟಿ ಎಂದು ತನ್ನ ಪ್ರಯತ್ನವನ್ನು ಅಲ್ಲಿಗೇ ಬಿಟ್ಟು ಬಿಟ್ಟಿದ್ದಾರೆ.
ಎತ್ತಿನಗಾಡಿಯಲ್ಲಿ ತನಗಾಗದನ್ನು ತುಂಬಿಸಿದ ಕಾರಣ ಎರಡೂ ಎತ್ತುಗಳು ತನಗೆ ಇಷ್ಟ ಬಂದ ಕಡೆ ಓಡಿದ್ದು, ಗಾಡಿಯನ್ನು ಹಿಡಿಯಲು ಕಾರ್ಯಕರ್ತರೂ ಎತ್ತುಗಳ ಹಿಂದೆ ಓಡುವ ಮೂಲಕ ನಗೆಪಾಟಲಿಗೆ ತುತ್ತಾಗಿದ್ದಾರೆ.