Connect with us

    LATEST NEWS

    ತಮ್ಮದೇ ಸರಕಾರದ ವಿರುದ್ದ ಮಾಜಿ ಶಾಸಕರೊಬ್ಬರ ಪ್ರತಿಭಟನೆ- ಅವರು ಇನ್ನೂ ವಿರೋಧ ಪಕ್ಷದಲ್ಲಿದ್ದಾರೆ- ವೇದವ್ಯಾಸ್ ಕಾಮತ್

    ಮಂಗಳೂರು ಡಿಸೆಂಬರ್ 23: ಸ್ಟೇಟ್ ಬ್ಯಾಂಕ್ ನಲ್ಲಿ ನಿಲ್ಲಿಸಲಾಗುತ್ತಿದ್ದ ಖಾಸಗಿ ಸಿಟಿ ಬಸ್ ಗಳನ್ನು ಸ್ಥಳಾಂತರ ಮಾಡಿರುವುದರಿಂದ ಅಲ್ಲಿನ ವ್ಯಾಪಾರಸ್ಥರಿಗೆ ನಷ್ಟವಾಗುತ್ತಿದೆ ಎಂದು ಮಾಜಿ ಎಂಎಲ್ ಸಿ ಐವನ್ ಡಿಸೋಜಾ ಪ್ರತಿಭಟನೆ ನಡೆಸಿದಕ್ಕೆ ಶಾಸಕ ವೇದವ್ಯಾಸ್ ಕಾಮತ್ ತಿರುಗೇಟು ನೀಡಿದ್ದು, ಮಾಜಿ ಶಾಸಕರು ತಾವು ಇನ್ನೂ ವಿರೋಧ ಪಕ್ಷದಲ್ಲಿ ಇದ್ದಾರೆ ಎಂದು ತಿಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


    ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಹಂಪನಕಟ್ಟೆಯ ಬಸ್ಟ್ಯಾಂಡ್ ಹಾಗೂ ವ್ಯಾಪಾರಸ್ಥರಿಗೆ ಸರಿಯಾದ ವ್ಯವಸ್ಥೆಗಳು ಕಲ್ಪಿಸಬೇಕು ಎಂದು ಆಡಳಿತ ಪಕ್ಷದ ಇಲ್ಲಿನ ಮಾಜಿ ಶಾಸಕರೊಬ್ಬರು ಪ್ರತಿಭಟನೆ ನಡೆಸಿದ್ದು ಅತ್ಯಂತ ಹಾಸ್ಯಾಸ್ಪದವಾಗಿದ್ದು ಆ ಮಾಜಿ ಶಾಸಕರು ಇನ್ನೂ ಕೂಡ ತಾವು ವಿರೋಧ ಪಕ್ಷದಲ್ಲಿದ್ದೇವೆ ಎಂಬ ಭಾವನೆಯಲ್ಲಿದ್ದಾರೆ ಎಂದು ಕಾಣುತ್ತಿದೆ. ಪ್ರಸ್ತುತ ಈಗ ಅವರದ್ದೇ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಅವರದ್ದೇ ಸರ್ಕಾರದ ಮಂತ್ರಿಗಳು, ಅವರದ್ದೇ ಸರ್ಕಾರದ ಅಧಿಕಾರಿಗಳು, ಇದ್ದರೂ ಸಹ ಅವರಿಗೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಿಲ್ಲವೆಂದಾದರೆ ಜಿಲ್ಲೆಯಲ್ಲಿ ಅವರ ಮಾತಿಗಿರುವ ಬೆಲೆ ಏನು ಎಂಬುದು ಸ್ಪಷ್ಟವಾಗುತ್ತಿದೆ.

    ಸಾರ್ವಜನಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಾಗ ಆ ಮಾಜಿ ಶಾಸಕರು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬಹುದಿತ್ತು. ಅದು ಬಿಟ್ಟು ಸಾರ್ವಜನಿಕರೊಂದಿಗೆ ಸೇರಿ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಪಕ್ಷದಲ್ಲಿ ಅವರ ಸ್ಥಾನ ಏನೆಂಬುದನ್ನು ತೋರಿಸಿ ಕೊಟ್ಟಿದ್ದಾರೆ.ಇತ್ತೀಚಿಗೆ ಮಹಾನಗರ ಪಾಲಿಕೆಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುವ 34 ಜನರನ್ನು ಇವರದ್ದೇ ಸರ್ಕಾರ ನೇಮಕ ಮಾಡಿದ ಪಾಲಿಕೆ ಆಯುಕ್ತರು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ ಬಗ್ಗೆ ಉಂಟಾದ ವಿವಾದವನ್ನು ಬಗೆಹರಿಸಲು ಈ ಮಾಜಿ ಶಾಸಕರಿಗೆ ಆಯುಕ್ತರ ಜೊತೆ ಮಾತುಕತೆ ನಡೆಸಿಯೂ ಸಾಧ್ಯವಾಗಿಲ್ಲ. ಪಾಲಿಕೆಯ ಎಲ್ಲಾ ಅಧಿಕಾರಿಗಳು ನೇರವಾಗಿ ಸರ್ಕಾರದ ಅಧೀನದಲ್ಲಿ ಇರುವವರು. ಹಾಗಿದ್ದರೂ ಕೂಡಾ ಆ ಮಾಜಿ ಶಾಸಕರು ನಗರದ ಮೇಯರ್ ಅವರ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದು ಈ ವಿಷಯ ಪ್ರಸ್ತಾಪಿಸುತ್ತಾರೆ ಎಂದರೆ ಅವರು ಅದೆಷ್ಟು ಅಸಹಾಯಕರಾಗಿದ್ದಾರೆ ಎಂದು ತಿಳಿದು ಬರುತ್ತದೆ.

    ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಕರಾವಳಿಯ ಹಿಂದೂ ಕಾರ್ಯಕರ್ತರ ಮೇಲೆ ಏಕಪಕ್ಷೀಯವಾಗಿ ಗಡಿಪಾರು ಅಸ್ತ್ರ ಪ್ರಯೋಗಿಸುತ್ತಲೇ ಇದೆ. ತಿಂಗಳ ಹಿಂದೆಯಷ್ಟೇ ಐದು ಜನ ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ಜಾರಿ ಮಾಡಿದ್ದ ಜಿಲ್ಲೆಯ ಪೊಲೀಸರು, ಇದೀಗ ಮತ್ತೆ ಇಬ್ಬರು ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಆಣತಿಯಂತೆ ಇವೆಲ್ಲ ನಡೆಯುತ್ತಿದ್ದು ಪದೇ ಪದೇ ಹಿಂದೂ ಸಂಘಟನೆಗಳ ಕಾರ್ಯಕರ್ತರ ತಾಳ್ಮೆಯನ್ನು ಪರೀಕ್ಷಿಸುವುದನ್ನು ಹಾಗೂ ಹಿಂದೂಗಳ ಮೇಲಿನ ದ್ವೇ಼ಷ ರಾಜಕಾರಣವನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸುತ್ತೇನೆ. ಇಲ್ಲದಿದ್ದಲ್ಲಿ ಹಿಂದೂ ಸಮಾಜದೊಂದಿಗೆ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *