LATEST NEWS
ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ ಇದ್ದರೆ ಮೊದಲು ಆ ಕೆಲಸವನ್ನು ಇಲ್ಲಿ ಮಾಡಿ ತೋರಿಸಲಿ – ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು ಫೆಬ್ರವರಿ 09: ಕುದ್ರೋಳಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಮೇಯರ್ ಮನೋಜ್ ಕುಮಾರ್ ಅವರು ದಿಢೀರ್ ದಾಳಿ ನಡೆಸಿದ್ದು ಶ್ಲಾಘನೀಯವೆಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು.
ಸಚಿವ ಮಂಕಾಳ ವೈದ್ಯರು, ಅಕ್ರಮವಾಗಿ ಗೋವುಗಳನ್ನು ಕಡಿಯುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದು ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ ಇದ್ದರೆ ಮೊದಲು ಆ ಕೆಲಸವನ್ನು ಇಲ್ಲಿ ಮಾಡಿ ತೋರಿಸಲಿ. ವಾಸ್ತವದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಒಂದೂ ಕಸಾಯಿಖಾನೆ ಇಲ್ಲ. ಆದರೂ ದಿನನಿತ್ಯ ಗೋಮಾಂಸ ರವಾನೆಯಾಗುತ್ತಿದ್ದರೂ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆಸುವ ಧೈರ್ಯವನ್ನು ಪೊಲೀಸ್ ಇಲಾಖೆ ತೋರಿಸುತ್ತಿಲ್ಲ. ಇಲ್ಲಿ ರಾಜ್ಯ ಸರ್ಕಾರವೇ ಅಕ್ರಮಕ್ಕೆ ಬೆಂಬಲ ನೀಡಿ ಪೊಲೀಸರ ಕೈಕಟ್ಟಿ ಹಾಕಿರುವುದು ಸ್ಪಷ್ಟವಾಗುತ್ತಿದೆ ಎಂದರು.
ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕೇವಲ ಮಹಾನಗರ ಪಾಲಿಕೆ ಜವಾಬ್ದಾರಿಯಲ್ಲ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೂ ಜವಾಬ್ದಾರಿಯಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮ ಗೋವಧಾಕಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನುಗಳನ್ನು ತಂದ ಪರಿಣಾಮ ಅಕ್ರಮಗಳು ನಿಯಂತ್ರಣಕ್ಕೆ ಬಂದಿತ್ತು. ಹಾಗಾಗಿ ಮತ್ತೆ ಅಂತಹ ಕಾನೂನುಗಳು ಜಾರಿಗೆ ಬರಬೇಕೆಂದು ಆಗ್ರಹಿಸುತ್ತೇನೆ. ಇಲ್ಲದಿದ್ದರೆ ಮುಂದೇನಾದರೂ ಅನಾಹುತಗಳು ಸಂಭವಿಸಿದರೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.