LATEST NEWS
ಶಿವರಾತ್ರಿ ಸಂದರ್ಭ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಧರ್ಮಸ್ಥಳದಿಂದ ವಿಶೇಷ ಸೂಚನೆ

ಮಂಗಳೂರು, ಫೆಬ್ರವರಿ 09: ಮಹಾಶಿವರಾತ್ರಿ ವೇಳೆ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಆಗಮಿಸುವ ಭಕ್ತರಿಗೆ ಧರ್ಮಸ್ಥಳ ಕ್ಷೇತ್ರದಿಂದ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಪ್ರತಿ ವರ್ಷ ಮಹಾ ಶಿವರಾತ್ರಿ ಆಚರಿಸಲು ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಲಕ್ಷಾಂತರ ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಾರೆ. ಇದು ಪ್ರತಿ ವರ್ಷವೂ ನಡೆದುಕೊಂಡು ಬರುತ್ತಿರುವ ಪರಂಪರೆಯಾಗಿದೆ. ಈ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಸಲಹೆಗಳು ಹೀಗಿವೆ

ಪಾದಯಾತ್ರಿಗಳು ರಸ್ತೆಯ ಬಲಬದಿಯಲ್ಲಿ ಚಲಿಸಿ.
ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಕಡ್ಡಾಯವಾಗಿ ಉಡುವ ಬಟ್ಟೆಯ ಬೆನ್ನಿನಲ್ಲಿ, ತೋಳಿನಲ್ಲಿ, ತಲೆಯ ದಿರಿಸಿನಲ್ಲಿ ಪ್ರತಿಫಲಕ (Reflector) ಇರಲೇಬೇಕು.
ಪಾದಯಾತ್ರೆಯಲ್ಲಿ ಬರುವಾಗ ಶಿವ ಪಂಚಾಕ್ಷರಿ ಮಂತ್ರ ಪಠಿಸುತ್ತಾ ಬನ್ನಿ.
ನೀವು ವಾಸ್ತವ್ಯ ಇರುವ ಸ್ಥಳದಲ್ಲಿ ಮತ್ತು ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಇತ್ಯಾದಿ ಮಾಡುವುದರಿಂದ ಇತರ ಸದ್ಭಕ್ತರನ್ನು ಹೀಯಾಳಿಸಿದಂತಾಗುತ್ತದೆ.
ತಂಗುವ ಸ್ಥಳ, ಅಡುಗೆ ಮಾಡಿದ ಸ್ಥಳವನ್ನು ಸ್ವಯಂಸ್ಪೂರ್ತಿಯಿಂದ ಸ್ವಚ್ಛ ಮಾಡಿರಿ.
ನೀವು ಬಳಸುವ ಪ್ಲಾಸ್ಟಿಕ್ ಮತ್ತು ಕಸ-ಕಡ್ಡಿಗಳನ್ನು ಒಂದು ಚೀಲದಲ್ಲಿ ತುಂಬಿ ತ್ಯಾಜ್ಯ ವಿಲೇವಾರಿಗೆ ಇರುವ ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಿ.
ಪಾದಯಾತ್ರಿಗಳು ಏಕಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸುವ ಬದಲು, ಒಂದೇ ಬಾಟಲಿಯಲ್ಲಿ ದಾರಿಯುದ್ದಕ್ಕೂ ವಿವಿಧೆಡೆ ಲಭ್ಯವಿರುವ ಕುಡಿಯುವ ನೀರನ್ನು ತುಂಬಿಸಿಕೊಂಡು ಮರುಬಳಕೆ ಮಾಡಿದರೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಿದಂತಾಗುತ್ತದೆ.