LATEST NEWS
ರಾಜ್ಯದ್ದು “ಈಗ ಬರ್ಕೊ-ಆಮೇಲೆ ಹರ್ಕೊ” ಬಜೆಟ್ – ಶಾಸಕ ಕಾಮತ್

ಮಂಗಳೂರು ಮಾರ್ಚ್ 07: ಬಜೆಟ್ ಎಂಬುದು ಕೇವಲ ಬಿಳಿ ಹಾಳೆ ಅಲ್ಲ ಎಂದು ಬಜೆಟ್ ಭಾಷಣ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒಂದೊಂದು ಘೋಷಣೆ ಕೇಳುತ್ತಿದ್ದರೆ “ಈಗ ಬೇಕಾದ್ದನ್ನು ಬರೆದುಕೊಂಡು ಘೋಷಣೆ ಮಾಡೋದು, ಆಮೇಲೆ ಅದನ್ನು ಹರಿದು ಹಾಕೋದು” ಎನ್ನುವಂತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ರವರು ಹೇಳಿದರು.
ಓಲೈಕೆ ರಾಜಕಾರಣದ ಕರಿ ಛಾಯೆ ಇಲ್ಲೂ ಎದ್ದು ಕಾಣುತ್ತಿದ್ದು ಹಿಂದುಳಿದ, ಶೋಷಿತ ವರ್ಗಗಳ ಕಡೆಗಣನೆ ಮಾಡಲಾಗಿದೆ. ನಾರಾಯಣ ಗುರು ಅಭಿವೃದ್ಧಿ ನಿಗಮ ಹಾಗೂ ಬಂಟ್ ನಿಗಮಕ್ಕೆ ಈ ಬಾರಿಯೂ ಬಿಡಿಗಾಸು ನೀಡದೇ ಕರಾವಳಿ ಅಭಿವೃದ್ಧಿಯ ಪಾಲಿನ ನೀರಸ ಬಜೆಟ್ ಮಂಡಿಸಿದ್ದು ದುರದೃಷ್ಟಕರ ಎಂದರು. ಸಿದ್ದರಾಮಯ್ಯನವರು ಕೇವಲ ತಮ್ಮ ದಾಖಲೆಯ ಸಲುವಾಗಿ ಈ ಬಜೆಟ್ ಮಂಡಿಸಿದ್ದು ಸ್ವತಃ ಅವರಲ್ಲೂ ಉತ್ಸಾಹ ಇರಲಿಲ್ಲ, ಅದೇ ರೀತಿಯಲ್ಲಿ ಆಡಳಿತ ಪಕ್ಷದ ನಾಯಕರಲ್ಲೂ ಯಾವುದೇ ನಿರೀಕ್ಷೆಗಳು ಇರಲಿಲ್ಲ. ಆದರೆ ಜನರ ಮೂಗಿಗೆ ತುಪ್ಪ ಸವರುವ ಕೆಲಸವನ್ನಂತೂ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಶಾಸಕರು ವ್ಯಂಗ್ಯವಾಡಿದರು
