LATEST NEWS
ಪರುಶುರಾಮ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರವೇ ಅಲ್ಲ – ಶಾಸಕ ಸುನಿಲ್ ಕುಮಾರ್
ಉಡುಪಿ ಅಕ್ಟೋಬರ್ 21: ಕಾರ್ಕಳದ ಪರುಶುರಾಮ್ ಥೀಮ್ ಪಾರ್ಕ್ ವಿವಾದಕ್ಕೆ ಇದೀಗ ಶಾಸಕ ಸುನಿಲ್ ಕುಮಾರ್ ಮೌನ ಮುರಿದಿದ್ದು, ಪರುಶುರಾಮ ಥೀರ್ಮ್ ಪಾರ್ಕ್ ಧಾರ್ಮಿಕ ಕ್ಷೇತ್ರವೇ ಅಲ್ಲ ಅದೊಂದು ಪ್ರವಾಸಿ ತಾಣ ಮಾತ್ರ ಎಂದು ಹೇಳಿದ್ದಾರೆ.
ಕಾರ್ಕಳ ಬಿಜೆಪಿ ಕಚೇರಿಯಲ್ಲಿಂದು ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೇಸ್ ನಾಯಕರು ಪರುಶುರಾಮ ಥೀಮ್ ಪಾರ್ಕ ನಲ್ಲಿ ಹಿಂದುತ್ವದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಪರಶುರಾಮ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರವೇ ಅಲ್ಲ. ಅದೊಂದು ಪ್ರವಾಸಿ ತಾಣ ಆಗಿದೆ. ಅಲ್ಲಿಗೆ ಯಾರು ಬೇಕಾದರೂ ಪಾದರಕ್ಷೆಯನ್ನು ಹಾಕಿಕೊಂಡು ಹೋಗಬಹುದು. ಅಲ್ಲಿ ತೆಂಗಿನಕಾಯಿ ಒಡೆ ಯಲು, ಊದುಬತ್ತಿ ಹಚ್ಚಲು, ಮಂಗಳಾರತಿ ಮಾಡಲು ಅವಕಾಶವೇ ಇಲ್ಲ ಎಂದು ಕಾರ್ಕಳ ಶಾಸಕ, ಮಾಜಿ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪರುಶುರಾಮ ಥೀಮ್ ಪಾರ್ಕ್ ಒಂದು ಪ್ರವಾಸೋದ್ಯಮ ಸ್ಥಳವೆಂದು ಮೊದಲಿನಿಂದಲೂ ನಾನು ಹೇಳಿಕೊಂಡು ಬಂದಿದ್ದೇನೆ. ಆದರೆ ಕೆಲವರಿಗೆ ಈಗ ಹಿಂದುತ್ವ ಶುರುವಾಗಿ ಬಿಟ್ಟಿದೆ. ಭಾವನೆಗೆ ಧಕ್ಕೆಯಾಗಿದೆಂದು ಹೇಳುವವರು ಪಾರ್ಕ್‌ನ ಕೆಳಗೆ ನಿರ್ಮಿಸಿರುವ ಭಜನಾ ಮಂದಿರಕ್ಕೆ ಒಂದು ದಿನವೂ ಭೇಟಿ ಕೊಟ್ಟಿಲ್ಲ. ಒಂದು ರೂಪಾಯಿ ಹುಂಡಿಗೆ ದುಡ್ಡು ಹಾಕಿಲ್ಲ ಎಂದು ಅವರು ಟೀಕಿಸಿದರು. ಇದಕ್ಕೆ ಧಾರ್ಮಿಕ ಸ್ಪರ್ಶ ಕೊಡುವ ನಿಟ್ಟಿನಲ್ಲಿ ಕೆಳಗೊಂದು ಭಜನಾ ಮಂದಿರ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಧಾರ್ಮಿಕತೆ ಬೇರೆ, ಪ್ರವಾಸೋದ್ಯಮ ಬೇರೆ ಎಂಬ ಕಾರಣಕ್ಕೆ ಈ ಎರಡು ಕಾರ್ಯಕ್ರಮವನ್ನು ಬೆರೆಸಿಲ್ಲ. ಪರಶುರಾಮನ ಮೂರ್ತಿಯನ್ನು ಬೇರೆಯಾಗಿ ಉದ್ಘಾಟನೆ ಮಾಡಲಾಗಿತ್ತು. ಇದು ಅರ್ಥ ಮಾಡಿಕೊಳ್ಳದ ಕೆಲವರು ದಿನಕ್ಕೊಂದು ಕಟ್ಟು ಕತೆಗಳನ್ನು ಹೇಳಿ ಜನರನ್ನು ನಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಅಲ್ಲದೆ ರಾಜ್ಯ ಸರಕಾರ ಬಂದು 5 ತಿಂಗಳಾದರೂ ಇಲ್ಲಿಯವರೆಗೆ ಯಾವುದೇ ತನಿಖೆ ನಡೆಸಿಲ್ಲ ಎಂದು ಅವರು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.