LATEST NEWS
ಯುವ ಉದಯೋನ್ಮುಖ ನಟ ರಕ್ಷಿತ್ ಶೆಟ್ಟಿ ಅವರನ್ನು ಟಾರ್ಗೆಟ್ ಮಾಡಬೇಡಿ – ಮಿಥುನ್ ರೈ
ಮಂಗಳೂರು ಮಾರ್ಚ್ 13: ಉಡುಪಿ ಕೃಷ್ಣ ಮಠದ ಭೂಮಿಗೆ ಸಂಬಂಧಿಸಿದ ವಿವಾದದಲ್ಲಿ ಎಂಟ್ರಿಯಾದ ನಟ ರಕ್ಷಿತ್ ಶೆಟ್ಟಿ ಕುರಿತಂತೆ ಕಾಂಗ್ರೇಸ್ ಮುಖಂಡ ಮಿಥುನ್ ರೈ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ನಮ್ಮ ಯುವ ಉದಯೋನ್ಮುಖ ನಟ ರಕ್ಷಿತ್ ಶೆಟ್ಟಿ ಅವರನ್ನು ಟಾರ್ಗೆಟ್ ಮಾಡಬೇಡಿ, ಅವರು ನಮ್ಮ ತುಳುನಾಡಿನ ಹೆಮ್ಮೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಮಿಥುನ್ ರೈ ನನ್ನ ಹೇಳಿಕೆಯು ಪೇಜಾವರ ಶ್ರೀಗಳ ಭಾಷಣದಿಂದ ಉಲ್ಲೇಖಿಸಲ್ಪಟ್ಟಿದೆಯೇ ಹೊರತು ಯಾವುದು ನನ್ನ ವೈಯಕ್ತಿಕ ಹೇಳಿಕೆಯಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಮಿಥುನ್ ರೈ ಹೇಳಿಕೆ ವಿರುದ್ದ ಟ್ವಿಟರ್‌ನಲ್ಲಿ ಟೀಕೆ ಮಾಡಿದ್ದ ರಕ್ಷಿತ್ ಶೆಟ್ಟಿ, ‘ದೇವಾಲಯಗಳ ನಗರಿ ಉಡುಪಿಗೆ ಸಾವಿರಕ್ಕೂ ಹೆಚ್ಚು ವರ್ಷದ ಬರೆದಿಟ್ಟಿರುವ ಇತಿಹಾಸ ಇದೆ. ನಿಮಗೆ ಈ ಬಗ್ಗೆ ಗೊತ್ತಿರದಿದ್ದರೇ ಏಕೆ ಸಾರ್ವಜನಿಕ ಸಮಾರಂಭಗಳಲ್ಲಿ ನಿಮ್ಮ ಅಜ್ಞಾನ ಪ್ರದರ್ಶಿಸುತ್ತೀರಿ?’ ಎಂದು ಕಿಡಿಕಾರಿದ್ದರು. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಪರ ವಿರೋಧದ ಚರ್ಚೆಗಳು ನಡೆದಿದ್ದವು. ಒಂದು ಗುಂಪು ಮಿಥುನ್ ರೈ ಅವರನ್ನು ಟೀಕಿಸಿದರೆ, ಮತ್ತೊಂದು ಗುಂಪು ರಕ್ಷಿತ್ ಶೆಟ್ಟಿ ಅವರನ್ನು ಟೀಕಿಸಿತ್ತು. ವಿಚಾರವು ವಿವಾದದ ರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಮಿಥುನ್ ರೈ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನಾನು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಷ್ಠಾವಂತ ಅನುಯಾಯಿ ಹಾಗೂ ಅವರ ಬೋಧನೆಗಳು ಮತ್ತು ಕೋಮು ಸೌಹಾರ್ದ ಸಿದ್ಧಾಂತಗಳನ್ನು ನನ್ನ ಕೊನೆಯ ಉಸಿರು ಇರುವವರೆಗೂ ಪಾಲಿಸುತ್ತೇನೆ. ನಾನು ಏನೇ ಮಾತನಾಡಿದರೂ ಅದು ಪೇಜಾವರ ಶ್ರೀಗಳ ಭಾಷಣದಿಂದ ಉಲ್ಲೇಖಿಸಲ್ಪಟ್ಟಿದೆಯೇ ಹೊರತು ಯಾವುದು ನನ್ನ ವೈಯಕ್ತಿಕ ಹೇಳಿಕೆಯಲ್ಲ ಏಕೆಂದರೆ ನಾನು ಇತಿಹಾಸಕಾರನಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿವೆ. ಇಂತಹ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕೆ, ಬಿಜೆಪಿಯವರು ಸೃಷ್ಟಿಸಿದ ಇಂತಹ ವಿವಾದಗಳು ಕೇವಲ ರಾಜಕೀಯ ಗಿಮಿಕ್ ಆಗಿದೆ ಎಂಬುವುದು ಸ್ಪಷ್ಟವಾಗಿ ಕಾಣುತ್ತಿದ್ದೆ. ರಕ್ಷಿತ್ ಶೆಟ್ಟಿ ಅವರ ಮಾತಿನಲ್ಲಿ ಸರಿ ಇರಬಹುದು, ಆದರೆ ನನ್ನ ದೃಷ್ಟಿಕೋನದಿಂದ ನಾನು ಕೂಡ ಸರಿ. ನಮ್ಮ ಗೌರವಾನ್ವಿತ ಶ್ರೀಗಳು ನಮಗೆ ಕಲಿಸಿದ೦ತೆಯೇ ನಾನು ಕೋಮು ಸೌಹಾರ್ದತೆಯನ್ನು ಬೋಧಿಸುತ್ತೇನೆ, ಏಕೆಂದರೆ ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಅದರ ಅವಶ್ಯಕತೆಯಿದೆ. ನನ್ನ ಎಲ್ಲಾ ಅನುಯಾಯಿಗಳು ಈ ಗೊಂದಲ ಮತ್ತು ಸೃಷ್ಟಿಯಾದ ವಿವಾದವನ್ನು ಕೊನೆಗಾಣಿಸಬೇಕೆಂದು ನಾನು ತಮ್ಮಲ್ಲಿ ವಿನಂತಿಸುತ್ತೇನೆ. ಹಾಗೂ ನಮ್ಮ ಯುವ ಉದಯೋನ್ಮುಖ ನಟ ರಕ್ಷಿತ್ ಶೆಟ್ಟಿ ಅವರನ್ನು ಟಾರ್ಗೆಟ್ ಮಾಡಬೇಡಿ, ಅವರು ನಮ್ಮ ತುಳುನಾಡಿನ ಹೆಮ್ಮೆ. ಏನೇ ಅಡಚಣೆ ಬಂದರು ಸಹ ತುಳುನಾಡಿನ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ. ಹೀಗೆಂದು ಮಿಥುನ್ ರೈ ಅವರು ತಮ್ಮ ಹೇಳಿಕೆಯಲ್ಲಿ ಬರೆದಿದ್ದಾರೆ.