LATEST NEWS
ಮಣಿಪಾಲ – ಮುಸ್ಲಿಂ ವಿಧ್ಯಾರ್ಥಿಯನ್ನು ತರಗತಿಯಲ್ಲಿ `ಟೆರರಿಸ್ಟ್’ ಎಂದ ಪ್ರೊಫೆಸರ್
ಮಣಿಪಾಲ ನವೆಂಬರ್ 28: ಮಾಹೆ ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನಲ್ಲಿ ಪ್ರಾಧ್ಯಾಪಕರೊಬ್ಬರು ತರಗತಿ ಸಮಯದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ `ಟೆರರಿಸ್ಟ್’ ಎಂದು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇದೀಗ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೇ ತಿಂಗಳ ನವೆಂಬರ್ 26ರಂದು ಘಟನೆ ನಡೆದಿದ್ದು, ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಮುಸ್ಲಿಮರು ಟೆರರಿಸ್ಟ್ ಗಳು ಎಂಬ ಅರ್ಥದಲ್ಲಿ ಪ್ರೊಫೆಸರ್ ಹೇಳಿದ್ದು,ಈಗ ವಿವಾದಕ್ಕೆ ಕಾರಣವಾಗಿದೆ.
ಪ್ರೊಫೆಸರ್ ಮಾತಿಗೆ ತರಗತಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿ, ಮುಸ್ಲಿಂ ಕಮ್ಯೂನಿಟಿಯನ್ನು ಟೆರರಿಸ್ಟ್ ಎಂದು ಕರೆಯಬೇಡಿ, ಅನಗತ್ಯವಾಗಿ ಈ ರೀತಿ ಮಾತನಾಡಬೇಡಿ ಎಂದಿದ್ದಾನೆ. ಬಳಿಕ ಪ್ರಾಧ್ಯಾಕರು ವಿದ್ಯಾರ್ಥಿ ತನ್ನ ಮಗನಂತೆ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿ `ನೀವು ನಿಮ್ಮ ಮಗನಿಗೆ ಹೀಗೆ ಮಾತನಾಡುತ್ತೀರಾ? ನೀವು ಅವನನ್ನು ಭಯೋತ್ಪಾದಕ ಎಂದು ಕರೆಯುತ್ತೀರಾ? ನೀವು ಎಷ್ಟು ಜನರ ಮುಂದೆ ನನ್ನನ್ನು ಹಾಗೆ ಕರೆಯುತ್ತೀರಿ? ಇದು ತರಗತಿ, ನೀವು ವೃತ್ತಿಪರರಾಗಿ ಕಲಿಸುತ್ತಿದ್ದೀರಿ, ಮುಸ್ಲಿಮನಾಗಿ ದಿನನಿತ್ಯ ಇದನ್ನು ಎದುರಿಸುವುದು ತಮಾಷೆಯಲ್ಲ. ನೀವು ನನ್ನನ್ನು ಹಾಗೆ ಕರೆಯಬೇಡಿ” ಎಂದು ವಿದ್ಯಾರ್ಥಿ ವಾಗ್ವಾದಕ್ಕಿಳಿದಿದ್ದಾನೆ. ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಪ್ರೊಫೆಸರ್ ವಿಷಾದ ವ್ಯಕ್ತಪಡಿಸಿ, ಸ್ಥಳದಲ್ಲೇ ಕ್ಷಮೆ ಕೋರಿದ್ದಾರೆ.
ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ ಎಂದು ವಿದ್ಯಾರ್ಥಿ ಆಕ್ಷೇಪಿಸಿದ್ದಾನೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಉಪನ್ಯಾಸಕನ ವಿರುದ್ಧ ಮಾಹೆ ವಿಶ್ವವಿದ್ಯಾನಿಲಯ ಕ್ರಮ ಕೈಗೊಂಡಿದೆ. ವಿವಿಯ ಉಪನ್ಯಾಸಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ನಿರ್ಧರಿಸಿದೆ. ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಸಾಂತ್ವನ ಹೇಳಿದೆ.