KARNATAKA
ತುಂಗಭದ್ರಾ ಅಣೆಕಟ್ಟು ಬಿಕ್ಕಟ್ಟು ಯಶಸ್ವಿಯಾಗಿ ನಿಭಾಯಿಸಿದ 20 ಕಾರ್ಮಿಕರಿಗೆ ತಲಾ 50 ಸಾವಿರ ರೂಪಾಯಿ ನೀಡಿ ಕೊಟ್ಟ ಮಾತು ಉಳಿಸಿಕೊಂಡ ಸಚಿವ ಝಮೀರ್ ಅಹ್ಮದ್..!
ಕೊಪ್ಪಳ : ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತುಂಗಭದ್ರಾ ಅಣೆಕಟ್ಟೆಗೆ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿ ಯಶಸ್ಸು ಪಡೆದುಕೊಂಡ ಕಾರ್ಮಿಕರಿಗೆ ನಗದು ನೀಡಿ ಕೊಟ್ಟ ಮಾತನ್ನು ಸಚಿವ ಝಮೀರ್ ಅಹಮದ್ ಉಳಿಸಿಕೊಂಡಿದ್ದಾರೆ.
ಅಣೆಕಟ್ಟಿನಿಂದ ಹೊರ ಹೋಗುತ್ತಿದ್ದ ನೀರನ್ನು ಸ್ಟಾಪ್ ಗೇಟ್ ಅಳವಡಿಕೆಯ ಮೂಲಕ ನಿಲ್ಲಿಸಿದ ಪ್ರಮುಖ 20 ಮಂದಿ ಕಾರ್ಮಿಕರಿಗೆ ತಲಾ 50 ಸಾವಿರ ರೂ.ನಗದು ನೀಡಿ ರವಿವಾರ ಸ್ಮಾನಿಸಿ ಗೌರವಿಸಲಾಯಿತು. ಸಚಿವರ ಸೂಚನೆ ಮೇರೆಗೆ ಕಂಪ್ಲಿ ಕ್ಷೇತ್ರದ ಶಾಸಕ ಜಿ.ಎನ್.ಗಣೇಶ್, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಮಾಮಿ ನಿಯಾಝ್, ಮುಖಂಡ ವಿಜಯಕುಮಾರ್ ಸ್ವಾಮಿ ಹಾಗೂ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ತೀರ ಕಷ್ಟದ ಕಾರ್ಯ ಇದಾಗಿದ್ದು ಅಣೆಕಟ್ಟಿಗೆ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಗೊಳಿಸಿ ನಿಮಗೆಲ್ಲ ವೈಯಕ್ತಿಕವಾಗಿ ತಲಾ 50 ಸಾವಿರ ರೂ.ಬಹುಮಾನ ನೀಡುತ್ತೇನೆ ಎಂದು ಸಚಿವ ಝಮೀರ್ ಅಹ್ಮದ್ ಈ ಹಿಂದೆ ಪ್ರಕಟಿಸಿದ್ದರು. ಅದರಂತೆಯೇ ಝಮೀರ್ ಅಹ್ಮದ್ ಅವರ ಅನುಪಸ್ಥಿತಿಯಲ್ಲಿ ಶಾಸಕ ಗಣೇಶ್ ಅವರಿಗೆ ಆ ಜವಾಬ್ದಾರಿ ವಹಿಸಿ, ವೈಯಕ್ತಿಕವಾಗಿ ಹಣ ಕಳುಹಿಸಿಕೊಟ್ಟು ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದಾರೆ.