LATEST NEWS
ಕಟೀಲು ದೇವಸ್ಥಾನದ ಆವರಣದಲ್ಲಿ ಕೆಟ್ಟ ಶಬ್ದ ಬಳಸಿ ಪತ್ರಕರ್ತರಿಗೆ ನಿಂಧಿಸಿದ ಸಚಿವ ರೇವಣ್ಣ

ಕಟೀಲು ದೇವಸ್ಥಾನದ ಆವರಣದಲ್ಲಿ ಕೆಟ್ಟ ಶಬ್ದ ಬಳಸಿ ಪತ್ರಕರ್ತರಿಗೆ ನಿಂಧಿಸಿದ ಸಚಿವ ರೇವಣ್ಣ
ಮಂಗಳೂರು ಜುಲೈ 14: ಅತೃಪ್ತರ ರಾಜೀನಾಮೆಯಿಂದಾಗಿ ಪತನದತ್ತ ಮೈತ್ರಿ ಸರಕಾರ ಸಾಗುತ್ತಿರುವ ಹಿನ್ನಲೆಯಲ್ಲಿ ಸೂಪರ್ ಸಿಎಂ ರೇವಣ್ಣ ಅವರ ಟೆಂಪಲ್ ರನ್ ನಡೆಯುತ್ತಿದೆ. ಟೆಂಪಲ್ ರನ್ ನಡುವೆಯೇ ಕಟೀಲ್ ದೇವಸ್ಥಾನದಲ್ಲಿ ವರದಿಗಾರರೊಬ್ಬರಿಗೆ ಕೆಟ್ಟ ಶಬ್ದಗಳನ್ನು ಬಳಸಿ ನಿಂದಿಸಿದ್ದು ಈಗ ವಿವಾದಕ್ಕೀಡಾಗಿದೆ.
ಮೈತ್ರಿ ಸರಕಾರದ ಶಾಸಕರ ರಾಜೀನಾಮೆ ಪರ್ವ ಮುಂದುವರೆಯುತ್ತಿದ್ದಂತೆ ಸರಕಾರ ಉಳಿಸಿಕೊಳ್ಳಲು ರೇವಣ್ಣ ರಾಜ್ಯದ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಕಳೆದ 6 ದಿನಗಳಿಂದ ಬರಿಗಾಲಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಇಂದು ದೇಗುಲಗಳ ನಗರಿ ಉಡುಪಿಯಲ್ಲಿ ದೇವಾಲಯಗಳ ದರ್ಶನ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ದಕ್ಷಿಣಕನ್ನಡ ಜಿಲ್ಲೆಗೂ ಭೇಟಿ ನೀಡಿರುವ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆ ಮುಗಿಸಿಕೊಂಡು ಬಂದ ಸಚಿವ ರೇವಣ್ಣ ಅವರನ್ನು ಮಾಧ್ಯಮ ಪ್ರತಿನಿಧಿಗಳು ಮಾತಾಡಿಸಲು ಮುಂದಾದ ಸಂದರ್ಭ ತಾಳ್ಮೆ ಕಳೆದು ಕೊಂಡ ರೇವಣ್ಣ ವರದಿಗಾರರು ಅಲ್ಲಿಗೆ ಹೋಗಿದ್ದೇ ತಪ್ಪು ಅನ್ನುವ ರೀತಿ ವರ್ತಿಸಿದ್ದಾರೆ.
ದೇವಾಲಯದ ಆವರಣದಲ್ಲಿ ನಿಂತು ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದ ವರದಿಗಾರರ ಮೇಲೆ ಕೆಟ್ಟ ಶಬ್ದ ಬಳಕೆ ಮಾಡಿ ಅಶಿಸ್ತು ಮೆರೆದಿದ್ದಾರೆ. ತಾನು ಕಟೀಲು ಶ್ರೀದುರ್ಗಾಪರಮೇಶ್ವರ ದೇವರ ಸನ್ನಿದಿಯಲ್ಲಿ ನಿಂತಿದ್ದೀನಿ ಅನ್ನೋದು ಮರೆತು ಕಚ್ಡಾಡ ನನ್ ಮಗ್ನೇ ನಾಚಿಗೆಯಾಗೋದಿಲ್ವ ಅಂತಾ ಮಾಧ್ಯಮದ ಪ್ರತಿನಿಧಿಗಳಿಗೆ ಬೈದಿದ್ದಾರೆ.
ಅಲ್ಲದೆ ವರದಿಗಾರರು ತೆಗೆದು ವಿಡಿಯೋ ಪೋಟೋವನ್ನು ಡಿಲಿಟ್ ಕೂಡ ಮಾಡಿಸಿದ್ದಾರೆ. ಫೋಟೋ, ವೀಡಿಯೋ ಚಿತ್ರೀಕರಣ ವಿರೋಧಿಸುವ ಭರದಲ್ಲಿ ಸಚಿವ ರೇವಣ್ಣ ತಾನು ನಿಂತಿರುವ ಪುಣ್ಯಕ್ಷೇತ್ರದ ಮಹಿಮೆಯನ್ನೂ ಮರೆತು ದರ್ಪ ಮೆರೆದಿದ್ದಾರೆ.
ದೇವಿಯ ಎದುರೇ ಅವಾಚ್ಯವಾಗಿ ಬೈದಿರೋದು ದೇವಿಗೆ ಅವಮಾನ ಮಾಡಿದಂತೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೇವಣ್ಣ ದೇವಿಯ ಬಳಿ ಕ್ಷಮಾಪಣೆ ಕೇಳಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.