LATEST NEWS
ಮಂಗಳೂರು ನಗರದ ಅಂಗನವಾಡಿಗಳಿಗೆ ಸಚಿವೆ ಜಯಮಾಲಾ ದಿಢೀರ್ ಭೇಟಿ ಪರಿಶೀಲನೆ

ಮಂಗಳೂರು ನಗರದ ಅಂಗನವಾಡಿಗಳಿಗೆ ಸಚಿವೆ ಜಯಮಾಲಾ ದಿಢೀರ್ ಭೇಟಿ ಪರಿಶೀಲನೆ
ಮಂಗಳೂರು ಅಗಸ್ಟ್ 6: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ಮಂಗಳೂರು ನಗರದ ಬಿಜೈ ಕಾಪಿಕಾಡ್ ಹಾಗೂ ಶಕ್ತಿನಗರ ಪದವು ಅಂಗನವಾಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ, ಬಿಸಿಯೂಟ ಕಾರ್ಯಕರ್ತೆಯರೊಂದಿಗೆ ಸಮಾಲೋಚನೆ ನಡೆಸಿದರು.
ಬಿಜೈ ಅಂಗನವಾಡಿಯಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಊಟವನ್ನು ಸಚಿವೆ ಜಯಮಾಲಾ ಅವರು ಪರಿಶೀಲನೆ ನಡೆಸಿದರು. ನಂತರ ಊಟ ಬಡಿಸುತ್ತಿದ್ದ ಕಾರ್ಯಕರ್ತೆಯೊರೊಂದಿಗೆ ಊಟದ ಶುಚಿ ರುಚಿ ಬಗ್ಗೆ ವಿಚಾರಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಊಟದ ಬಗ್ಗೆ ಮಾಹಿತಿ ಪಡೆದುಕೊಂಡರು.

ಬಿಜೈ ಅಂಗನವಾಡಿಯ ಸುತ್ತಮುತ್ತ ಶುಚಿತ್ವ ನಿರ್ಹಿಸಿ, ಮಕ್ಕಳಿಗೆ ಹೊರಂಗಣ ಆಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಊಟದ ಮೆನು ಕಾರ್ಡ್ ನಲ್ಲಿರುವ ರೀತಿಯಲ್ಲಿ ಊಟ ಸರಬರಾಜು ಮಾಡಬೇಕು , ಹಾಗೂ ಕರಾವಳಿ ಭಾಗದ ವಾತಾವರಣವನ್ನು ಗಮನಿಸಿಕೊಂಡು ಮಕ್ಕಳಿಗೆ ಮಜ್ಜಿಗೆ ಕೊಡುವ ಬಗ್ಗೆ ಕ್ರಮಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ನಿರ್ದೇಶನ ನೀಡಿದರು.
ಶಕ್ತಿನಗರದ ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಹಾಗೂ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಶಕ್ತಿನಗರದಲ್ಲಿ ಅಂಗನವಾಡಿ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡುವಂತೆ ಸಚಿವರು ನಿರ್ದೇಶನ ನೀಡಿದರು. ಶಕ್ತಿನಗರದ ಅಂಗನವಾಡಿಯಲ್ಲಿ ದಾಸ್ತಾನು ಕೊಠಡಿಯನ್ನು ಪರಿಶೀಲನೆ ನಡೆಸಿ ಧವಸಧಾನ್ಯಗಳ ಗುಣಮಟ್ಟ ಪರಿಶೀಲನೆ ನಡೆಸಿದರು.
ಸಚಿವೆ ಡಾ.ಜಯಮಾಲ ಅವರು ಇಂದು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತು ಸಂಗ್ರಾಹಲಯಕ್ಕೆ ಭೇಟಿ ನೀಡಿದರು.