LATEST NEWS
ಸೇನಾ ಕಾರ್ಯಾಚರಣೆಯ ಆಯ್ಕೆಯೂ ದೇಶದ ಮುಂದಿದೆ, ಚೀನಾಕ್ಕೆ ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್
ನವದೆಹಲಿ,ಆಗಸ್ಟ್ 24: ಚೀನಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಗಡಿ ವಿವಾದವು ಇದೀಗ ತಾರಕಕ್ಕೇರುವ ಸಾಧ್ಯತೆ ಹೆಚ್ಚಾಗಿದೆ. ಚೀನಾದ ಗಡಿ ತಕರಾರಿಗೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತೀಯ ಮೂರೂ ಸೇನೆಗಳ ಮುಖ್ಯಸ್ಥ ಬಿಪಿನ್ ರಾವತ್ ಭಾರತದ ಮುಂದೆ ಸೇನಾ ಕಾರ್ಯಾಚರಣೆಯ ಆಯ್ಕೆಯೂ ಇದೆ ಎಂದು ಚೀನಾಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಗಲ್ವಾನ್ ವ್ಯಾಲಿಯಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವಿನ ಪರಸ್ಪರ ಹೊಡೆದಾಟದ ಬಳಿಕ ಚೀನಾ ಮತ್ತೆ ಭಾರತದ ಗಡಿಯಲ್ಲಿ ತನ್ನ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಿದೆ. ಗಲ್ವಾನ್ ವ್ಯಾಲಿಯಲ್ಲಿ ನಡೆದ ಎರಡೂ ಸೈನಿಕರ ನಡುವಿನ ಹೋರಾಟದಲ್ಲಿ ಭಾರತೀಯ ಸೇನೆಗೆ ಸೇರಿದ 20 ಸೈನಿಕರು ಹುತಾತ್ಮರಾಗಿದ್ದರೆ, ಚೀನಾದ ಪಡೆಗೂ ಭಾರೀ ನಷ್ಟ ಸಂಭವಿಸಿದೆ. ಈ ಬಳಿಕ ಗಡಿಯಲ್ಲಿ ಘರ್ಷಣೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಭಾರತ ಮತ್ತು ಚೀನಾದ ಸೈನ್ಯಗಳ ಲೆಫ್ಟಿನೆಂಟ್ ಜನರಲ್ ಮಟ್ಟದ 5 ಸಭೆಗಳು ವಿಫಲಗೊಂಡಿದ್ದು, ಚೀನಾ ಮತ್ತೆ ಮತ್ತೆ ಗಡಿ ತಂಟೆಗೆ ಬರುತ್ತಿರುತ್ತಿದೆ.
ಚೀನಾದ ಈ ನಡೆಗೆ ಭಾರತೀಯ ಮೂರೂ ಸೇನೆಗಳ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ ಚೀನಾಕ್ಕೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ. ರಾಜತಾಂತ್ರಿಕ ಹಾಗೂ ಸೇನಾ ಮಾತುಕತೆಗಳು ವಿಫಲವಾದಲ್ಲಿ ಭಾರತದ ಮುಂದೆ ಸೇನಾ ಕಾರ್ಯಾಚರಣೆಯ ಆಯ್ಕೆಯೂ ಮುಕ್ತವಾಗಿದೆ ಎಂದಿದ್ದಾರೆ. ಭಾರತ ಚೀನಾ ಗಡಿಯ ಫಿಂಗರ್ ಏರಿಯಾ, ಗಲ್ವಾನ್ ವ್ಯಾಲಿ, ಹಾಟ್ ಸ್ಪ್ರಿಂಗ್ ಮತ್ತು ಕೊಂಗ್ರುಂಗ್ ನಾಲಾ ಭಾಗದಲ್ಲಿ ಚೀನಾ ಪಡೆ ತನ್ನ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.
ಚೀನಾ ಸರಕಾರದ ನಡೆಯನ್ನು ಭಾರತ ಖಂಡಿಸಿದ್ದು, ಈ ಹಿನ್ನಲೆಯಲ್ಲಿ ಮೊದಲ ಹಂತವಾಗಿ ಚೀನಾದೊಂದಿಗೆ ವ್ಯವಹಾರವನ್ನು ಆದಷ್ಟು ಕಡಿಮೆ ಮಾಡಲು ಕಾರ್ಯತಂತ್ರಗಳನ್ನು ಆರಂಭಿಸಿದೆ. ಚೀನಾದಿಂದ ಸಾಕಷ್ಟು ಪ್ರಮಾಣದಲ್ಲಿ ಮಕ್ಕಳ ಆಟಿಕೆ ಸಾಮಾಗ್ರಿಗಳು ಬರುತ್ತಿರುವುದನ್ನು ತಡೆಯಲು ಭಾರತದಲ್ಲೇ ಮಕ್ಕಳ ಆಟಿಕೆ ಸಾಮಾಗ್ರಿಗಳನ್ನು ತಯಾರಿಸಲು ಭಾರತ ಸರಕಾರ ಯೋಜನೆಯನ್ನು ಹಾಕಿಕೊಂಡಿದೆ. ಅಲ್ಲದೆ ಈಗಾಗಲೇ ಚೀನಾದ ಟಿಕ್-ಟಾಕ್ ಸೇರಿದಂತೆ ಪ್ರಮುಖ ಆ್ಯಪ್ ಗಳನ್ನೂ ಭಾರತ ನಿಶೇಧಿಸಿದೆ.