LATEST NEWS
ಪೊರಕೆ ಹಿಡಿದು ಕಲ್ಲಡ್ಕ ಬಸ್ಟ್ಯಾಂಡ್ ಕ್ಲೀನ್ ಮಾಡಿದ ಮೆಲ್ಕಾರ್ ಟ್ರಾಫಿಕ್ ಪೊಲೀಸರು
ಕಲ್ಲಡ್ಕ , ಆಗಸ್ಟ್ 19: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಧೂಳು ಕೆಸರಿನಿಂದ ಕೂಡಿದ್ದ ಬಸ್ ನಿಲ್ದಾಣವನ್ನು ಪ್ರತಿ ವಾರಕ್ಕೊಮ್ಮೆ ಪೊಲೀಸರ ತಂಡ ನೀರು ಹಾಕಿ ತೊಳೆಯುವ ಅದ್ಭುತ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆಯುತ್ತಿದೆ.
ಕಲ್ಲಡ್ಕದ ಪೇಟೆಯಲ್ಲಿರುವ ಬಸ್ ನಿಲ್ದಾಣ ಇತ್ತೀಚೆಗೆ ಧೂಳು ಹಾಗೂ ಕೆಸರಿನಿಂದ ಕೂಡಿದ್ದು, ಸಾರ್ವಜನಿಕರು ಬಸ್ ನಿಲ್ದಾಣದೊಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಮನಗಂಡು ಟ್ರಾಫಿಕ್ ಎಎಸ್ಐ ವಿಜಯ ಕುಮಾರ್ ಅವರ ನೇತೃತ್ವದ ಎ.ಎಸ್.ಐ.ದೇವಪ್ಪ, ಹಾಗೂ ಕೆ.ಎಸ್.ಆರ್.ಪಿ.ತಂಡ ಪ್ರತಿ ವಾರಕ್ಕೊಮ್ಮೆ ಶುಚಿತ್ವ ಮಾಡುತ್ತಿದ್ದಾರೆ.
ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವಚ್ಚತೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆಯಾದರೂ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಮಾಡಬೇಕಾದ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಹಾಗಾಗಿ ಪೋಲೀಸ್ ತಂಡ, ಇತರ ಸಂಘ ಸಂಸ್ಥೆಗಳು ಸ್ವಚ್ಚತೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರು.