LATEST NEWS
ಮಂಗಳೂರು – ಬಿಜೆಪಿ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕಾರ್ಯಕ್ರಮ ಮುಂದೂಡಿಕೆ
ಮಂಗಳೂರು ಮಾರ್ಚ್ 04: ಲೋಕಸಭೆ ಚುನಾವಣೆಗೆ ಬಿಜೆಪಿ ಈಗಾಗಲೇ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ 33 ಹಾಲಿ ಸಂಸದರನ್ನು ಕೈಬಿಟ್ಟಿದೆ. ಅದರಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕೂಡ ಸೇರಿದ್ದು, ಈ ಹಿನ್ನಲೆ ಮಂಗಳೂರಿನಲ್ಲಿ ಇಂದು ನಡೆಯಬೇಕಿದ್ದ ಅವರ ಕಾರ್ಯಕ್ರಮ ಮುಂದೂಡಲಾಗಿದೆ.
ಲೋಕಸಭಾ ಚುನಾವಣೆಗೆ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ 33 ಹಾಲಿ ಸಂಸದರನ್ನು ಕೈಬಿಡಲಾಗಿದೆ. ಈ ಪೈಕಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕೂಡ ಒಬ್ಬರು. ಇವರ ಬದಲು ದೆಹಲಿ ಟಿಕೆಟ್ ಅನ್ನು ಸುಷ್ಮ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ನೀಡಲಾಗಿದೆ. ಇತ್ತ, ಟಿಕೆಟ್ ಕೈತಪ್ಪುತ್ತಿದ್ದಂತೆ ಮಂಗಳೂರಿನಲ್ಲಿ ಮೀನಾಕ್ಷಿ ಲೇಖಿ ಅವರು ಭಾಗಿಯಾಗಬೇಕಿದ್ದ ಕಾರ್ಯಕ್ರಮವನ್ನು ಬಿಜೆಪಿ ಮುಂದೂಡಿದೆ.
ಇಂದು ಮಂಗಳೂರಿನ ಸಂಘನಿಕೇತನದಲ್ಲಿ ಬೂತ್ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರನ್ನು ಆಹ್ವಾನಿಸಲಾಗಿತ್ತು. ಅವರು ಭಾಗಿಯಾಗುವುದು ಖಚಿತವಾಗಿತ್ತು. ಆದರೆ, ಇವರಿಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈಬಗ್ಗೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ಅರುಣ್ ಜಿ. ಶೇಟ್ ಮಾಹಿತಿ ನೀಡಿದ್ದಾರೆ.