LATEST NEWS
ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಪಾರಿವಾಳದ ರಕ್ಷಣೆ ಮಾಡಿದ ಮೆಸ್ಕಾಂ ಸಿಬ್ಬಂದಿ
ಕೋಟ,ಮೇ 15: ಗಾಳದ ಬೀಣಿಯಿಂದಾಗಿ ವಿದ್ಯುತ್ ತಂತಿಗೆ ಸಿಲುಕಿ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಪಾರಿವಾಳವೊಂದನ್ನು ಮನುಷ್ಯರ ರೀತಿಯಲ್ಲೇ ಮಾನವೀಯ ಕಾರ್ಯಚರಣೆ ನಡೆಸಿ ರಕ್ಷಿಸಿದ ಘಟನೆ ಮೇ13ರಂದು ಕಾವಡಿ ಸೇತುವೆ ಬಳಿ ನಡೆದಿದೆ.
ಸ್ವಚ್ಛಂದವಾಗಿ ಬಾನೆತ್ತರಕ್ಕೆ ಹಾರಾಡುತ್ತಿದ್ದ ಪಾರಿವಾಳವೊಂದು ತನ್ನ ಮೈಗೆ ಸುತ್ತಿಕೊಂಡಿದ್ದ ಗಾಳದ ಬೀಣಿಯಿಂದಾಗಿ ವಿದ್ಯುತ್ ತಂತಿಗೆ ಸಿಕ್ಕಿ ಸಾಯುವ ಸ್ಥಿತಿಯಲ್ಲಿ ಒದ್ದಾಡುತಿತ್ತು. ಇದನ್ನು ಗಮನಿಸಿದ ಚಾಲಕ ರಾಜ ಕಾರ್ಕಡ ಎನ್ನುವವರು ಪಾರಿವಾಳದ ಪೋಟೋ ಕ್ಲಿಕ್ಕಿಸಿ ರಕ್ಷಣೆಗೆ ನೆರವಾಗುವಂತೆ ಸಾಲಿಗ್ರಾಮ ಪ.ಪಂ. ಎನ್ನುವ ವಾಟ್ಸ್ಆ್ಯಫ್ ಗ್ರೂಪ್‍ಗೆ ಪೋಸ್ಟ್ ಮಾಡಿದ್ದರು. ಸಂದೇಶವನ್ನು ಗಮನಿಸಿದ ಪತ್ರಕರ್ತರು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಮೆಸ್ಕಾಂ ಇಲಾಖೆಯವರ ಗಮನಕ್ಕೆ ತಂದು ಪಾರಿವಾಳವನ್ನು ರಕ್ಷಿಸುವಂತೆ ಕೋರಿದರು.
ಅನಂತರ ಮೆಸ್ಕಾಂ ಸಿಬಂದಿಗಳು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಹೊಳೆಯ ಪಕ್ಕದಲ್ಲಿ ವಿದ್ಯುತ್ ತಂತಿ ಹಾದುಹೋಗಿದ್ದರಿಂದ ಸಾಕಷ್ಟು ಕಷ್ಟದಿಂದ ಕಾರ್ಯಚರಣೆ ನಡೆಸುವ ಅನಿವಾರ್ಯತೆ ಇತ್ತು. ಆದರೂ ಪಾರಿವಾಳದ ಪ್ರಾಣ ಕಾಪಾಡುವ ಹುಮ್ಮಸ್ಸಿನೊಂದಿಗೆ ಒಬ್ಬರ ಭುಜದ ಮೇಲೆ ಇನ್ನೊಬ್ಬರು ನಿಂತು ಕೊಕ್ಕೆಯ ಸಹಾಯದಿಂದ ತಂತಿಗೆ ತಗಲಿದ ಬೀಣಿಯನ್ನು ತಪ್ಪಿಸಿ ಜೀವಂತವಾಗಿ ರಕ್ಷಿಸಿ ಮತ್ತೆ ಪುನಃ ಸ್ವಚ್ಛಂದವಾಗಿ ಬಾನ್ನೆತ್ತರಕ್ಕೆ ಹಾರಿಬಿಟ್ಟರು.
ಕೋಟ ಶಾಖೆಯ ಪ್ರಭಾರ ಶಾಖಾಧಿಕಾರಿ ಚಂದ್ರಶೇಖರ್, ಸಾೈಬ್ರಕಟ್ಟೆ ಶಾಖಾಧಿಕಾರಿ ವೈಭವ ಶೆಟ್ಟಿ, ಪವರ್ ಮ್ಯಾನ್ ಮೆಹಬೂಬ್,ವಿಶೇಷ ಕಾರ್ಯಪಡೆಯ ಸಿಬಂದಿ ಪ್ರಮೋದ್ ಹಾಗೂ ಸುನಿಲ್ ಕಾರ್ಯಚರಣೆಯಲ್ಲಿ ಸಹಕರಿಸಿದರು. ಮೆಸ್ಕಾಂ ಇಲಾಖೆಯ ಕಾರ್ಯವೈಖರಿ ಮತ್ತು ರಕ್ಷಣೆಗೆ ಮನವಿ ಮಾಡಿದವರ ಪಕ್ಷಿ ಪ್ರೀತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Video: