LATEST NEWS
ಬೀದಿ ಬದಿ ವ್ಯಾಪಾರಿಗಳಿಗೆ ಗುರತಿನ ಚೀಟಿ ನೀಡಿದ್ದು 10 ಮಂದಿಗೆ ಮಾತ್ರ ಸಾಲ ತೆಗೆದುಕೊಂಡಿದ್ದು 667 ಮಂದಿ
ಮಂಗಳೂರು ಅಗಸ್ಟ್ 06: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿರುವ ಬೀದಿ ಬದಿ ವ್ಯಾಪಾರಿಗಳ ಮೇಲೆ ‘ಅನಧಿಕೃತ ಗೂಡಂಗಡಿಗಳ ತೆರವು ನಿರಂತರ ಮುಂದುವರಿಯಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಬೀದಿ ಬದಿಯ ಗೂಡಂಗಡಿ ತೆರವಿನ ಬಗ್ಗೆ ಮೊದಲೇ ತಿಳಿಸಿದ್ದೆವು. ಆದರೂ ಬೀದಿ ಬದಿಯಲ್ಲಿ ಅನಧಿಕೃತ ವ್ಯಾಪಾರ ನಿಲ್ಲದ ಕಾರಣ ಕಾರ್ಯಾಚರಣೆ ನಡೆಸಬೇಕಾಗಿ ಬಂತು. ಟೀಕೆಗಳಿಗೆಲ್ಲ ಮಣಿಯುವುದಿಲ್ಲ’ ಎಂದರು.
2014ರ ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯನ್ವಯ ಪಾಲಿಕೆ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ 1045 ಮಂದಿಯನ್ನು ಗುರುತಿಸಿ, 667 ಮಂದಿಗೆ ಗುರುತಿನ ಚೀಟಿ ನೀಡಲು ಪಟ್ಟಣ ವ್ಯಾಪಾರ ಸಮಿತಿಯನ್ನು ನಿರ್ಧರಿಸಿದ್ದು ನಿಜ. ಶಾಶ್ವತ ರಚನೆ ನಿರ್ಮಿಸಬಾರದು ಎಂಬುದೂ ಸೇರಿದಂತೆ 18 ಷರತ್ತುಗಳಿಗೆ ಬೀದಿ ಬದಿ ವ್ಯಾಪಾರಿಗಳು ಒಪ್ಪಿರಲಿಲ್ಲ. 10 ಮಂದಿ ಹೊರತಾಗಿ ಉಳಿದ ಯಾರಿಗೂ ಗುರುತಿನ ಚೀಟಿ ನೀಡಿಲ್ಲ ಎಂದರು.
ಹಾಗಿದ್ದರೆ, 600ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ನೀಡಿದ್ದು ಹೇಗೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಯರ್, ‘ಪಾಲಿಕೆ ವ್ಯಾಪ್ತಿಯಲ್ಲಿ 667 ಮಂದಿಗೆ ಸಾಲ ನೀಡಿದ್ದು ನಿಜ. ಇದರಲ್ಲಿ ಮನೆಯಲ್ಲೇ ಆಹಾರ ತಯಾರಿಸಿ ಮಾರುವವರೂ ಇದ್ದಾರೆ’ ಎಂದು ಸಮರ್ಥಿಸಿಕೊಂಡರು.