KARNATAKA
ಮ್ಯಾಟ್ರಿಮೋನಿಯಲ್ ಮೋಸ– ₹ 43.51 ಲಕ್ಷ ನಾಮ ಹಾಕಿದ ವರ!
ಬೆಂಗಳೂರು, ಮೇ 16: ವೈವಾಹಿಕ ಜಾಲತಾಣದಲ್ಲಿ ಪರಿಚಯವಾದ ಯುವಕನೊಬ್ಬ ಮದುವೆಯಾಗುವುದಾಗಿ ಹೇಳಿ ನಗರದ ಮಹಿಳೆಯೊಬ್ಬರಿಂದ ₹ 43.51 ಲಕ್ಷ ಪಡೆದು ವಂಚಿಸಿದ್ದು, ಈ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆರ್.ಟಿ.ನಗರ ಬಳಿಯ ಗಂಗಾನಗರದ 39 ವರ್ಷದ ಮಹಿಳೆ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ರಾಜೇಶ್‌ಕುಮಾರ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಮಹಿಳೆ, ಭಾರತ್ ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ಖಾತೆ ತೆರೆದಿದ್ದರು. ಅಲ್ಲಿಯೇ ಅವರಿಗೆ ಆರೋಪಿ ರಾಜೇಶ್‌ಕುಮಾರ್ ಪರಿಚಯವಾಗಿತ್ತು. ಇಂಗ್ಲೆಂಡ್‌ನಲ್ಲಿ ವಾಸವಿರುವುದಾಗಿ ಹೇಳಿದ್ದ ರಾಜೇಶ್, ಹಲವು ದೇಶಗಳಲ್ಲಿ ನೂರಾರು ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿದ್ದ. ಅದನ್ನು ನಂಬಿದ್ದ ಮಹಿಳೆ, ಆತನ ಜೊತೆ ಹೆಚ್ಚು ಮಾತನಾಡಲಾರಂಭಿಸಿದ್ದರು’
‘ಏಪ್ರಿಲ್ 6ರಂದು ದೂರುದಾರ ಮಹಿಳೆಗೆ ಸಂದೇಶ ಕಳುಹಿಸಿದ್ದ ಆರೋಪಿ, ‘ಹೊಸ ಉದ್ಯಮ ಆರಂಭಿಸಲು ದುಬೈಗೆ ಹೊರಟಿದ್ದೇನೆ. ಇಂಗ್ಲೆಂಡ್‌ನಲ್ಲಿರುವ ಬೆಲೆಬಾಳುವ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ನಿನಗೆ ಕಳುಹಿಸುತ್ತೇನೆ. ದುಬೈನಿಂದ ನೇರವಾಗಿ ಭಾರತಕ್ಕೆ ಬಂದು ನಿನ್ನನ್ನು ಮದುವೆಯಾಗುತ್ತೇನೆ’ ಎಂದು ಆರೋಪಿ ಹೇಳಿದ್ದ. ಅದನ್ನು ಮಹಿಳೆ ನಂಬಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಏಪ್ರಿಲ್ 10ರಂದು ಮಹಿಳೆಗೆ ಕರೆ ಮಾಡಿದ್ದ ಆರೋಪಿಯೊಬ್ಬ, ‘ನಿಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ. ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳಿವೆ. ಕಸ್ಟಮ್ಸ್ ಶುಲ್ಕ ಪಾವತಿ ಮಾಡಿದರೆ, ನಿಮ್ಮ ವಿಳಾಸಕ್ಕೆ ಪಾರ್ಸೆಲ್ ಕಳುಹಿಸುತ್ತೇವೆ’ ಎಂದಿದ್ದ. ಅದನ್ನು ನಂಬಿದ್ದ ಮಹಿಳೆ, ಆರಂಭದಲ್ಲಿ 32,000 ಪಾವತಿಸಿದ್ದರು.’
‘ಪುನಃ ಕರೆ ಮಾಡಿದ್ದ ಆರೋಪಿ, ‘ಪಾರ್ಸೆಲ್‌ನಲ್ಲಿ ದೊಡ್ಡ ಪ್ರಮಾಣದ ಹಣವಿದೆ. ಹೀಗಾಗಿ, ಮತ್ತಷ್ಟು ಕಸ್ಟಮ್ಸ್ ಹಾಗೂ ಇತರೆ ಶುಲ್ಕ ಪಾವತಿಸಬೇಕು’ ಎಂದಿದ್ದ. ಅದನ್ನೂ ನಂಬಿದ್ದ ದೂರುದಾರ ಮಹಿಳೆ, ಹಂತ ಹಂತವಾಗಿ ₹ 43.51 ಲಕ್ಷ ವರ್ಗಾಯಿಸಿದ್ದರು. ಇದಾದ ನಂತರ, ಆರೋಪಿಗಳು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ. ಆನ್‌ಲೈನ್ ವರ ಹಾಗೂ ಇತರೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.