LATEST NEWS
ಮಾತೃಪೂರ್ಣ ಯೋಜನೆ, ಫಲಾನುಭವಿ ಖಾತೆಗೆ ಹಣ ನೀಡಿ – ಶೋಭಾ ಕರಂದ್ಲಾಜೆ

ಮಾತೃಪೂರ್ಣ ಯೋಜನೆ, ಫಲಾನುಭವಿ ಖಾತೆಗೆ ಹಣ ನೀಡಿ – ಶೋಭಾ ಕರಂದ್ಲಾಜೆ
ಉಡುಪಿ ಜುಲೈ 2 : ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಆಗಿಲ್ಲ, ಆದ್ದರಿಂದ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಊಟದ ಬದಲು, ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ನಿಗಧಿತ ಮೊತ್ತವನ್ನು ಜಮೆ ಮಾಡುವ ಕುರಿತಂತೆ ಸರ್ಕಾರಕ್ಕೆ ವರದಿ ನೀಡಿ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಸೋಮವಾರ , ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಯ ಪ್ರಗತಿಯ ಕುರಿತು ಮಾಹಿತಿ ಪಡೆದ ಸಂಸದರು , ಜಿಲ್ಲೆಯಲ್ಲಿ ಈ ಯೋಜನೆ ಶೇಕಡ 50 ರಷ್ಟು ಪ್ರಗತಿ ಸಾಧಿಸಿದ್ದು, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಬಂದು ಊಟ ಮಾಡುವುದು ಸಾಧ್ಯವಿಲ್ಲ, ಜಿಲ್ಲೆಯ ಭೌಗೋಳಿಕ ಪರಿಸರ ಮತ್ತು ಸ್ಥಳೀಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಯೋಜನೆಯನ್ನು ಅನುಷ್ಠಾನಗೊಳಿಸಿರುವುದು ಯೋಜನೆಯ ಹಿನ್ನಡೆಗೆ ಕಾರಣವಾಗಿದೆ, ಅದರ ಬದಲು ಕೇಂದ್ರ ಸರ್ಕಾರದ ಮಾತೃ ವಂದನಾ ಯೋಜನೆಯಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡುವ ಕುರಿತಂತೆ ನೂತನ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸಂಸದರು ಹೇಳಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಈ ಕುರಿತಂತೆ ಸದ್ರಿ ರಸ್ತೆ ನಿರ್ಮಾಣ ಸಂಸ್ಥೆ ನವಯುಗ ಕಂಪೆನಿಯವರು ಸೂಕ್ತ ಉತ್ತರವನ್ನೂ ನೀಡದೇ ಕಾಮಗಾರಿಯ ವಿಳಂಬಗೊಂಡಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ, ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯ ಬ್ರಿಡ್ಜ್ ಕಾಮಗಾರಿ ಕುಂಟುತ್ತಾ ಸಾಗಿದೆ, ಸರ್ವಿಸ್ ರಸ್ತೆ ಕಾಮಗಾರಿ ಮುಗಿದಿಲ್ಲ, ಹಲವೆಡೆ ರಸ್ತೆ ನಿರ್ಮಾಣದಿಂದ ಹಾನಿಯಾದ ಪೈಪ್ ಲೈನ್ ಗಳನ್ನು ದುರಸ್ತಿಪಡಿಸಿಲ್ಲ ಎಂದು ಸಂಸದರು ಹೇಳಿದರು, ಯೋಜನೆಯನ್ನು ಮಾರ್ಚ್ 2019 ರ ವೇಳೆಗೆ ಪೂರ್ಣಗೊಳಿಸಲಾಗುವುದು, ಒಟ್ಟು 34 ಕಿಮೀ ಸರ್ವಿಸ್ ರಸ್ತೆಯಲ್ಲಿ 30 ಕಿಮೀ ನಿರ್ಮಿಸಲಾಗಿದೆ , ಕಾರ್ಮಿಕರ ಸಮಸ್ಯೆಯಿಂದ ಕೆಲಸ ನಿದಾನಗತಿಯಲ್ಲಿ ನಡೆದಿದೆ ಎಂದು ನವಯುಗ ಕಂಪೆನಿಯ ಅಧಿಕಾರಿಗಳು ಹೇಳಿದರು. ಈ ಕಂಪನೆಯನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡಲಾಗುವುದು ಎಂದು ಸಂಸದರು ಹೇಳಿದರು.
ಜಿಲ್ಲೆಯಲ್ಲಿ ರೈಲ್ವೆ ಇಲಾಖೆ ಪ್ರಗತಿ ಕುರಿತಂತೆ, 11.33 ಕೋಟಿ ವೆಚ್ಚದಲ್ಲಿ ಬನ್ನಂಜೆ ನೂತನ ರೈಲ್ವೆ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್ 2019 ಕ್ಕೆ ಮುಗಿಯಲಿದೆ, 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮಕೃಷ್ಣ ಹೆಗಡೆ ತರಬೇತಿ ಕೇಂದ್ರದ ಕಾಮಗಾರಿಯು ನವೆಂಬರ್ 2018 ಕ್ಕೆ ಮುಕ್ತಾಯವಾಗಲಿದೆ, 317 ಕೋಟಿ ವೆಚ್ಚದಲ್ಲಿ ವೆರ್ಣಾ – ತೋಕೂರು ರೈಲ್ಚೆ ಮಾರ್ಗ ವಿದ್ಯುದೀಕರಣ ಕಾಮಗಾರಿ ಪ್ರಗತಿಯಲ್ಲಿದೆ, ಇಲಾಖೆಯ ಕಟ್ಟಡ ವಿಸ್ತರಣೆಗೆ 4 ಕೋಟಿ ರೂ ಅಗತ್ಯವಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
ಬಿ.ಎಸ್.ಎನ್.ಎಲ್ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಂಸದರು ಈ ಕುರಿತು ಕಾರಣ ಕೇಳಿದರು, ಕಳೆದ 4 ವರ್ಷದಲ್ಲಿ ಜಿಲ್ಲೆಯಲ್ಲಿ 44 ಹೊಸ ಟವರ್ ಅಳವಡಿಸಲಾಗಿದ್ದು, 165 3 ಜಿ ಟವರ್ ಮತ್ತು 215 2ಜಿ ಟವರ್ ಗಳು ಕಾರ್ಯ ನಿರ್ವಹಿಸುತ್ತಿವೆ ಹೊಸದಾಗಿ 28 ಟವರ್ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಮಸ್ಯೆ ಇರುವ ಕಡೆಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಅತ್ತೂರು ಚಚ್ ್ ಮತ್ತು ಪಾಜಕದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಟವರ್ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸುವಂತೆ ಹಾಗೂ ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ಕನೆಕ್ಟಿವಿಟಿಯಲ್ಲಿನ ಸಮಸ್ಯೆಯನ್ನು ಬಗೆ ಹರಿಸುವಂತೆ ಸಂಸದರು ಸೂಚಿಸಿದರು.
ರಾಜ್ಯದಲ್ಲಿ ಎಲ್ಲಾ ಆರೋಗ್ಯ ಸೇವೆಗಳನ್ನು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸೇರ್ಪಡೆ ಮಾಡಿದ್ದು, ಜಿಲ್ಲೆಯಲ್ಲಿನ ಕೆಲವು ಎಂಪೆನಲ್ ಆಸ್ಪತ್ರೆಗಳು,ಕೆಲವು ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದು, ಈ ಕುರಿತಂತೆ ಜಿಲ್ಲೆಯ ಎಲ್ಲಾ ಎಂಪೆನಲ್ ಆಸ್ಪತ್ರೆಗಳ ಸಭೆ ಕರೆದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಸ್ಯೆ ಬಗೆಹರಿಸುವಂತೆ ಸಂಸದರು ಹೇಳಿದರು.
ದೀನ್ ದಯಾಳ್ ಯೋಜನೆಯಡಿ ಗುರುತಿಸಲಾಗಿರುವ 2926 ಮನೆಗಳಲ್ಲಿ ಈಗಾಗಲೇ 1694 ಮನೆಗಳಿಗೆ ವಿದ್ಯುತ್ ಸಂಪಕ್ ನೀಡಿದ್ದು, ಬಾಕಿ ಉಳಿದ ಮನೆಗಳಿಗೆ ಸೆಪ್ಟಂಬರ್ ಅಂತ್ಯದ ವೇಳೆಗೆ ಸಂಪರ್ಕ ನೀಡಲಾಗುವುದು, ಯೋಜನೆಗಾಗಿ ಒಟ್ಟು 7.15 ಕೋಟಿ ಅನುದಾನ ಬಂದಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ನರ್ಮ್ ಬಸ್ ಗಳನ್ನು ನಿಗಧಿತ ಸಮಯಕ್ಕೆ ಸರಿಯಾಗಿ ಓಡಿಸುವಂತೆ ಸಂಸದರು ಸೂಚಿಸಿದರು.
ಜಿಲ್ಲೆಯಲ್ಲಿ ಬಾಕಿ ಇರುವ ರಸ್ತೆ ಕಾಮಗಾರಿಗಳು, ಬಂದರು ಕಾಮಗಾರಿಗಳು ಹಾಗೂ ಅವುಗಳ ಇದುವರೆಗಿನ ಪ್ರಗತಿ, ಅಗತ್ಯ ಅನುದಾನಗಳ ಬಗ್ಗೆ ವಿವರ ನೀಡುವಂತೆ ಸಂಸದರು ಸೂಚಿಸಿದರು.
ವಸತಿ ಯೋಜನೆಯ ಪ್ರಗತಿ ಕುರಿತಂತೆ, ಜಿಲ್ಲೆಯಲ್ಲಿ 7071 ವಸತಿ ರಹಿತರು ಮತು 12880 ಮಂದಿ ನಿವೇಶನ ರಹಿತರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು, ವಸತಿ ರಹಿತರು ಮತ್ತು ನಿವೇಶನ ರಹಿತರನ್ನು ಸರಿಯಾದ ರೀತಿಯಲ್ಲಿ ಗುರುತಿಸುವ ಕುರಿತಂತೆ ಎಲ್ಲಾ ಪಂಚಾಯತ್ ಗಳಿಗೆ ಸೂಚನೆ ನೀಡುವಂತೆ ಸಂಸದರು ಸೂಚಿಸಿದರು.
ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಗಳನ್ನು ನಗದು ರಹಿತ ವ್ಯವಹಾರ ಗ್ರಾಮಗಳನ್ನಾಗಿ ಮಾಡುವ ಉದ್ದೇಶದಿಂದ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 5 ಗ್ರಾಮಗಳಲ್ಲಿ ಯೋಜನೆಯನ್ನು ಜಾರಿಗೊಳಿಸಿ, ನಂತರ ಇಡೀ ಜಿಲ್ಲೆಗೆ ವಿಸ್ತರಿಸುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗೆ ಸಂಸದರು ಸೂಚಿಸಿದರು.
ಸ್ವಚ್ಛ ಭಾರತ್ ಅಭಿಯಾನ ಯೋಜನೆಯಡಿ , ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 28783 ಹಾಗೂ ನಗರ ಪ್ರದೇಶದಲ್ಲಿ 266 ಶೌಚಾಲಯ ನಿರ್ಮಿಸಿ ಸಂಪೂರ್ಣ ಗುರಿ ಸಾಧಿಸಿದ್ದು, ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ, ದಿಶಾ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಶ್ರೀಕಾಂತ ನಾಯಕ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.