DAKSHINA KANNADA
ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ

ಪುತ್ತೂರು: ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಡಿಸೆಂಬರ್ 21 ರಿಂದ ಡಿಸೆಂಬರ್ 27ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಪ್ರಥಮ ದಿನವಾದ ಡಿಸೆಂಬರ್ 21ರಂದು ಬ್ರಹ್ಮಕಲಶೋತ್ಸವ ಕಾರ್ಯಾಲಯ, ಪ್ರಾಚ್ಯ ವಸ್ತು ಪ್ರದರ್ಶನ, ಸಾಕ್ಷ್ಯ ಚಿತ್ರ,ಮುಖ್ಯ ಸಭಾ ವೇದಿಕೆ ಹಾಗೂ ಭಜನಾಮೃತ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಬ್ರಹ್ಮಕಲಶೋತ್ಸವ ಕಾರ್ಯಾಲಯವನ್ನು ಪ್ರಕಾಶ್ ಜೈನ್ ಕಂಪ್ಯೂಟರ್ ಕೀಲಿ ಒತ್ತುವ ಮೂಲಕ ಉದ್ಘಾಟಿಸಿದರು. ಪ್ರಾಚ್ಯ ವಸ್ತು ಪ್ರದರ್ಶಕ್ಕೆ ಕೃಷಿಕರಾದ ವೀರಪ್ಪ ಗೌಡ ಪಿಲಿಗುಂಡ ಚಾಲನೆ ನೀಡಿದರು. ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಮೊಕ್ತೇಸರರಾದ ಕೆ.ರಾಜೇಂದ್ರ ಆರಿಗ ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿದರು. ದೇವಾಲಯದಿಂದ ಜ್ಯೋತಿ ಹಾಗೂ ಶಂಖ ನಾದದೊಂದಿಗೆ ಸಭಾ ವೇದಿಕೆಗೆ ತೆರಳಿ ಬಳಿಕ ಕೋಡಿಂಬಾಡಿ ರೈ ಎಸ್ಟೇಟ್‌ನ ಗಿರಿಜಸಂಜೀವ ರೈರವರು ದೀಪ ಬೆಳಗಿಸಿ ಮುಖ್ಯ ಸಭಾ ವೇದಿಕೆಯನ್ನು ಉದ್ಘಾಟಿಸಿದರು.

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಯೋಗದೊಂದಿಗೆ ಭಜನಾಮೃತ-ಭಜಕರ ಸಮಾಗಮ ಕಾರ್ಯಕ್ರಮ ನಡೆಯಿತು. ಕೋಡಿಂಬಾಡಿ ರೈ ಎಸ್ಟೇಟ್‌ನ ಗಿರಿಜ ಸಂಜೀವ ರೈರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ‘ಬ್ರಹ್ಮಕಲಶೋತ್ಸವಗಳಿಂದಾಗಿ ತಾಯಿಯು ದೇಶಕ್ಕೆ ಬರುವಂತಹ ಕಷ್ಟಗಳನ್ನು ದೂರ ಮಾಡುವಂತಾಗಲಿ. ಶ್ರದ್ದಾಕೇಂದ್ರದಲ್ಲಿ ನಡೆಯುತ್ತಿರುವ ಈ ಪುಣ್ಯ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಭ್ರಹ್ಮಕಲಶೋತ್ಸವವು ಪ್ರತೀ ಮನೆಯ ಸಂಭ್ರಮವಾಗಿ ಮೂಡಿಬರಲಿ. ಭಜನಾಮೃತ ಕಾರ್ಯಕ್ರಮದ ಪ್ರೇರಣೆಯಿಂದಾಗಿ ಮನೆಮನೆಯಲ್ಲಿ ಭಜನೆಗಳು ಪ್ರಾರಂಭವಾಗಿ ವಿಭಜನೆ ನಿಲ್ಲಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಾರ್ಯಾಧ್ಯಕ್ಷರಾದ ಸೀತರಾಮ ಶೆಟ್ಟಿ, ಭಜನಾಮೃತ ಸಮಿತಿಯ ಸಂಯೋಜಕರಾದ ರಾಜಮಣಿ ರೈ ಮಠಂತಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ಹಾಗೂ ಸಾಮೂಹಿಕ ಭಜನೆ, ಕುಣಿತ ಭಜನೆ, ಜಪ ಕುಸುಮ ಶ್ಲೋಕ ಪಠಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಾಲಯ ಸಮಿತಿಯ ಸಂಚಾಲಕರಾದ ಸದಾಶಿವ ರೈ ಎಂ ಮಠಂತಬೆಟ್ಟು, ಪ್ರಾಚ್ಯ ವಸ್ತು ಪ್ರದರ್ಶನ ಸಮಿತಿಯ ಸಂಚಾಲಕರಾದ ಉಷಾ ಹರೀಶ್ ಆಳ್ವ, ಸಾಕ್ಷ್ಯಚಿತ್ರ ಸಮಿತಿಯ ಸಂಚಾಲಕ ಸತೀಶ್ ನಾಯಕ್ ಉಪಸ್ಥಿತರಿದ್ದರು.