DAKSHINA KANNADA
ಮಣಿಪುರ ಹಿಂಸಾಚಾರ ಖಂಡಿಸಿ ಕಾಂಗ್ರೆಸ್ ಸಮಿತಿಯಿಂದ ಬೃಹತ್ ಪ್ರತಿಭಟನೆ
ಮಂಗಳೂರು, ಜುಲೈ 31: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಮಿತಿ, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮುಖಂಡ ಸುಧೀರ್ ಮರೋಳಿ ಮಾತನಾಡಿ ಮಣಿಪುರದಲ್ಲಿ ಕಳೆದ ಮೂರು ತಿಂಗಳಿಂದ ಹಿಂಸಾಚಾರ ನಡೆಯುತ್ತಿದ್ದರೂ ಅದನ್ನು ನಿಯಂತ್ರಿಸಲು ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಕೇಂದ್ರ ಸರಕಾರದ ವೈಫಲ್ಯವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮಣಿಪುರ ಘಟನೆ ಆರಂಭವಾಗಿ 3 ತಿಂಗಳು ಕಳೆದರೂ ಪ್ರಧಾನಿಯಾಗಲಿ, ಬಿಜೆಪಿ ಸರಕಾರಗಳಾಗಲಿ, ಬಿಜೆಪಿ ನಾಯಕರಾಗಲಿ ತುಟಿ ಬಿಚ್ಚುವುದಿಲ್ಲ. ಮಹಿಳೆಯರ ರಕ್ಷಣೆ ಮಾಡುತ್ತೇವೆ ಎಂದು ಹೇಳಿ ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದ ಬಿಜೆಪಿ ಮುಖಂಡರು ಕೂಡಾ ಮಣಿಪುರದ ಮಹಿಳೆಯರ ಮೇಲಣ ಅತ್ಯಾಚಾರದ ಬಗ್ಗೆ ಮೌನವಾಗಿದ್ದಾರೆ.
ಬಿಜೆಪಿಯವರಿಂದ ದೇಶದ ರಕ್ಷಣೆಯಾಗಲಿ, ಮಹಿಳೆಯ ರಕ್ಷಣೆಯಾಗಲಿ ಸಾಧ್ಯವಿಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ. ಈಗಾಗಲೇ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯನ್ನು ಬಿಜೆಪಿಯವರು ಕುಂಠಿತಗೊಳಿಸಿದ್ದಾರೆ.
ಇದೀಗ ಉಡುಪಿ ಜಿಲ್ಲೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಉಡುಪಿಯ ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಉಡುಪಿ ಜಿಲ್ಲೆಯ ಸೌಹಾರ್ದಕ್ಕೆ ಧಕ್ಕೆ ತರುವವರಿಗೆ ಜನತೆ ಛೀಮಾರಿ ಹಾಕಬೇಕು. ಉಡುಪಿಯನ್ನು ಇನ್ನೊಂದು ದಕ್ಷಿಣ ಕನ್ನಡ ಜಿಲ್ಲೆಯಾಗಿಸಲು ಅವಕಾಶ ನೀಡದಿರಿ ಎಂದು ಯುವ ನಾಯಕ ಮಿಥುನ್ ರೈ ವಿನಂತಿಸಿದರು.

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಹಿರಿಯ ಮುಖಂಡ ಕೆಪಿಸಿಸಿ ಉಪಾಧ್ಯಕ್ಷ ಆರ್ ಪದ್ಮರಾಜ್, ಸುರೇಶ್ ಬಲ್ಲಾಳ್, ವಿಶ್ವಾಸ್ ಕುಮಾರ್ ದಾಸ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಅಶ್ರಫ್, ನವೀನ್ ಡಿ ಸೋಜ, ಕವಿತಾ ಸನಿಲ್ ಮೊದಲಾದವರಿದ್ದರು.
You must be logged in to post a comment Login