LATEST NEWS
ತುಳು ರಂಗಭೂಮಿ ಕಲಾವಿದ ವಿವೇಕ್ ಮಾಡೂರು ಹೃದಯಾಘಾತದಿಂದ ನಿಧನ

ಮಂಗಳೂರು ಮಾರ್ಚ್ 14: ಕಳೆದ ಕೆಲ ದಶಕಗಳಿಂದ ತುಳು ರಂಗಭೂಮಿಯಲ್ಲದೆ, ತುಳು ಚಿತ್ರರಂಗದಲ್ಲೂ ಕಲಾರಸಿಕರನ್ನ ತನ್ನ ಕುಬ್ಜ ದೇಹದಿಂದಲೇ ರಂಜಿಸುತ್ತಿದ್ದ ಪ್ರಚಂಡ ಕುಳ್ಳ ಖ್ಯಾತಿಯ ವಿವೇಕ್ ಮಾಡೂರು(52) ಇಂದು ಬೆಳಗ್ಗೆ ಹೃದಯಾಘಾತದಿಂದ ಮಾಡೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ವಿವೇಕ್ ತನ್ನ ಪತ್ನಿ ವೇದಾವತಿಯೊಂದಿಗೆ ಮದ್ದೂರಿನ ತನ್ನ ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ ಮನೆಯ ಶೌಚಾಲಯದಲ್ಲಿ ವಿವೇಕ್ ಅವರು ಬಿದ್ದಿದ್ದರು ಎಂದು ಹೇಳಲಾಗಿದ್ದು, ಬಳಿಕ ವಿವೇಕ್ ಅವರು ವಿಶ್ರಾಂತಿ ಪಡೆದಿದ್ದರು, ಬೆಳಗ್ಗೆ ಮನೆ ಮಂದಿ ಎಬ್ಬಿಸಲು ಹೋದಾಗ ಮೃತಪಟ್ಟಿದ್ದಾರೆ.

ವೃತ್ತಿಪರ ಹಾಸ್ಯನಟರಾಗಿದ್ದ ವಿವೇಕ್ ಕರಾವಳಿ ಪ್ರದೇಶದ ಹಲವಾರು ಪ್ರಸಿದ್ಧ ರಂಗಭೂಮಿ ತಂಡಗಳ ಭಾಗವಾಗಿದ್ದರು. ಅವರು ತುಳು ಚಲನಚಿತ್ರೋದ್ಯಮದ ಅತ್ಯುತ್ತಮ ಕಲಾವಿದರೊಂದಿಗೆ ನಟಿಸಿದ್ದಾರೆ, ಅವರು ತುಳು ರಂಗಭೂಮಿ ಕಲಾವಿದರ ಸಂಘದ ಸಕ್ರಿಯ ಸದಸ್ಯರಾಗಿದ್ದರು ಮತ್ತು ವಿವೇಕ್ ಅವರ ಕಲಾ ಪ್ರಾವೀಣ್ಯತೆಗೆ ಅನೇಕ ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ಅವರ ಅಕಾಲಿಕ ಅಗಲಿಕೆಗೆ ತುಳು ರಂಗಭೂಮಿ, ಕೋಸ್ಟಲ್ ವುಡ್ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.