Connect with us

DAKSHINA KANNADA

ಮಂಗಳೂರು :  ಪಾತಾಳ ವೆಂಕಟರಮಣ ಭಟ್‌ಗೆ ‘ಶೇಣಿ’ ಪ್ರಶಸ್ತಿ ಪ್ರದಾನ

ಮಂಗಳೂರು: ಶೇಣಿ ಪ್ರಶಸ್ತಿ ನನ್ನ ಪಾಲಿಗೆ ದೇವರ ಪ್ರಸಾದಕ್ಕೆ ಸಮನಾದುದು. ಈ ಪ್ರಶಸ್ತಿಯ ನಿರೀಕ್ಷೆಯೇ ಇರಲಿಲ್ಲ. ಶೇಣಿ ಗೋಪಾಲಕೃಷ್ಣ ಭಟ್ ಅವರ ಜತೆ ಒಡನಾಟ ಹೊಂದಿ ಕಲಾಮಾತೆಯ ಸೇವೆ ಮಾಡಿದ್ದರಿಂದ ಈ ಪ್ರಶಸ್ತಿ ನನಗೆ ಒಲಿದಿರಬಹುದು ಎಂದು ಭಾವಿಸುವುದಾಗಿ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ಅಭಿಪ್ರಾಯಪಟ್ಟರು.

ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ ಶೇಣಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶೇಣಿ ಪ್ರಶಸ್ತಿ-೨೦೨೪ ಸ್ವೀಕರಿಸಿ ಮಾತನಾಡಿದರು.
ಶೇಣಿ ಜತೆಗಿನ ಒಡನಾಟವನ್ನು ಸ್ಮರಿಸಿದ ಅವರು, ಆಟ-ಕೂಟಗಳಲ್ಲಿ ಶೇಣಿಯವರು ಇದ್ದರೆ ಸಹಕಲಾವಿದರು ಬಹಳ ಎಚ್ಚರಿಕೆಯಿಂದ ಅರ್ಥ ಹೇಳಬೇಕಿತ್ತು. ಅವರು ಸಹಕಲಾವಿದರ ಜತೆ ಪಾತ್ರಕ್ಕೆ ಒದಗುವ ಬಗೆ ಅಸಾಮಾನ್ಯವಾಗಿತ್ತು. ಹರಿದಾಸರಾಗಿದ್ದ ಅವರಿಂದ ಯಕ್ಷಗಾನದ ಮಾತುಗಾರಿಕೆಯ ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ಲಭಿಸಿದೆ. ಅವರಂಥ ಕಲಾವಿದರು ಇನ್ನಷ್ಟು ಹುಟ್ಟಿಬರಬೇಕು ಎಂದು ಆಶಿಸಿದರು.
ಕಾರ್ಯಕ್ರಮಕ್ಕೆ ಧರ್ಮದರ್ಶಿ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಚಾಲನೆ ನೀಡಿದರು. ಶೇಣಿಯವರು ಯಕ್ಷಗಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ ಮಹಾನ್ ಕಲಾವಿದ ಎಂದು ಅವರು ಹೇಳಿದರು. ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಹಿರಿಯ ಹೋಟೆಲ್ ಉದ್ಯಮಿ ಜಯಪ್ರಕಾಶ್ ರಾವ್, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಹಿರಿಯ ಚಿಂತಕ ನಿತ್ಯಾನಂದ ಕಾರಂತ ಶುಭಾಶಂಸನೆ ಮಾಡಿದರು.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎಂ.ಆರ್.ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅರ್ಥಧಾರಿ ಜಿ.ಕೆ.ಭಟ್ ಸೇರಾಜೆ ಶೇಣಿ ಸಂಸ್ಮರಣೆ ಮತ್ತು ಪಾತಾಳ ಅಭಿನಂದನಾ ನುಡಿಗಳನ್ನಾಡಿದರು. ಹರಿಕಥಾ ಪರಿಷತ್ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಕೂಡ್ಲು ಉಪಸ್ಥಿತರಿದ್ದರು. ಹಿರಿಯ ಅರ್ಥಧಾರಿ ಸರ್ಪಂಗಳ ಈಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *