DAKSHINA KANNADA
ಮಂಗಳೂರು ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಆಯುಕ್ತರ ಸಹಾಯ ಕೇಳಿದ ಚೀಟಿ ಫಂಡ್ ವ್ಯಕ್ತಿ..!
ಹಣ ಪಡಕೊಂಡ ಕೆಲವರು ಹಣ ವಾಪಸ್ ನೀಡದ ಕಾರಣ ಇತರರಿಗೆ ಸಕಾಲದಲ್ಲಿ ಹಣ ಪಾವತಿಸಲು ಸಾಧ್ಯವಾಗದೆ ಬೆದರಿಕೆಯನ್ನು ಹಾಕುತ್ತಿದ್ದು ಏನು ಮಾಡಬೇಕೆಂದು ತೋಚದೆ ಊರೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು : ಸಾರ್ವಜನಿಕರ ದುಃಖ ದುಮ್ಮಾನಗಳಿಗೆ ವೇದಿಕೆಯಾದ ಜನಪ್ರಿಯ ಮಂಗಳೂರು ನಗರ ಪೊಲೀಸ್ ಆಯುಕ್ತರ ಫೋನ್ ಇನ್ ಕಾರ್ಯಕ್ರಮ ಶನಿವಾರ ನಡೆಯಿತು.
ಒಂದು ಗಂಟೆ ಅವಧಿಯ ಫೋನ್ ಇನ್ ಕಾರ್ಯಕ್ರಮದಲ್ಲಿ 32 ಮಂದಿ ಕರೆ ಮಾಡಿ ತಮ್ಮ ಅಹವಾಲುಗಳನ್ನು ಆಯುಕ್ತರದಲ್ಲಿ ನಿವೇದಿಸಿದರು,
ಬಹುತೇಕ ಕರೆಗಳು ನಗರದ ಸಿಟಿ ಬಸ್ಸುಗಳ ಫುಟ್ ಬೋರ್ಡ್ ಸಮಸ್ಯೆ, ಅಡ್ಡಾದಿಟ್ಟಿ ವಾಹನಗಳ ಪಾರ್ಕಿಂಗ್, ಒಳ ರಸ್ತೆಗಳಲ್ಲಿ ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆಗೆ ಸಂಬಂಧಿಸಿದ್ದಾಗಿದ್ದುವು.
ವ್ಯಕ್ತಿಯೊಬ್ಬರು ಕರೆ ಮಾಡಿ ಕಾನೂನುಬಾಹಿರವಾಗಿ ನಾನು ಚೀಟಿ ಫಂಡ್ ನಡೆಸುತ್ತಿದ್ದೇನೆ. ಹಣ ಪಡಕೊಂಡ ಕೆಲವರು ಹಣ ವಾಪಸ್ ನೀಡದ ಕಾರಣ ಇತರರಿಗೆ ಸಕಾಲದಲ್ಲಿ ಹಣ ಪಾವತಿಸಲು ಸಾಧ್ಯವಾಗದೆ ಬೆದರಿಕೆಯನ್ನು ಹಾಕುತ್ತಿದ್ದು ಏನು ಮಾಡಬೇಕೆಂದು ತೋಚದೆ ಊರೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ನೀವು ಆ ರೀತಿ ಮಾಡಬೇಡಿ. ಕಚೇರಿಗೆ ಬಂದು ನಿಮ್ಮ ವ್ಯವಹಾರದ ಸಂಪೂರ್ಣ ಮಾಹಿತಿ ನೀಡಿ. ಯಾವ ರೀತಿಯಲ್ಲಿ ಕ್ರಮ ವಹಿಸಬಹುದು ಎಂದು ಪರಿಶೀಲನೆ ಮಾಡುತ್ತೇವೆ ಎಂದು ಧೈರ್ಯ ತುಂಬಿದರು.
ಮಂಗಳೂರು ನಗರದಲ್ಲಿ ಡ್ರಗ್ಸ್ ಮುಕ್ತ ಅಭಿಯಾನದ ನಿಟ್ಟಿನಲ್ಲಿ ಪೊಲೀಸರು ಮಾಡುತ್ತಿರುವ ಕಾರ್ಯಾಚರಣೆ ಉತ್ತಮವಾಗಿದೆ ಆದರೆ ಸಣ್ಣ ಗೂಡಂಗಡಿಗಳಿಗೆ ಪೊಲೀಸರು ದಾಳಿ ಮಾಡಿ ಪದೇ ಪದೇ ದಂಡ ಹಾಕುತ್ತಿದ್ದಾರೆ ಎಂಬ ಕರೆಗೆ ಉತ್ತರಿಸಿದ ಆಯುಕ್ತರು ಯಾರಿಗೂ ತೊಂದರೆ ಕೊಡುವ ಉದ್ದೇಶ ಪೊಲೀಸರಿಗಿಲ್ಲ.
ಆದರೆ ಕಾನೂನು ಪ್ರಕಾರ ಶಾಲಾ ಕಾಲೇಜುಗಳ 100 ಮೀಟರ್ ಸುತ್ತಮುತ್ತ ಇಂತಹ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡಿದ್ರೆ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
ಸಿಟಿ ಬಸ್ ನ ಫುಟ್ ಬೋರ್ಡಿನಿಂದ ಬಿದ್ದು ನಿರ್ವಾಹಕರೊಬ್ಬರು ನಗರದಲ್ಲಿ ದಾರುಣವಾಗಿ ಮೃತಪಟ್ಟ ಘಟನೆಯ ಬಳಿಕ ಈಗಾಗಲೇ ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಬಸ್ ಮಾಲಕರ ಜತೆ ಸಭೆ ನಡೆಸಲಾಗಿದೆ.
ಹೊಸ ಬಸ್ಸುಗಳಿಗೆ ಡೋರ್ ಅಳವಡಿಕೆ ಕಡ್ಡಾಯ ಪಡಿಸಲಾಗಿದೆ. ಹಳೆ ಬಸ್ಸುಗಳಲ್ಲಿ ಫುಟ್ಬೋರ್ಡ್ ನಲ್ಲಿ ಯಾರೂ ಇಲ್ಲದಿರುವುದು ಖಾತರಿಪಡಿಸಿದ ಬಳಿಕವೇ ಚಾಲಕ ವಾಹನವನ್ನು ಚಲಾಯಿಸಬೇಕೆಂಬ ನಿಟ್ಟಿನಲ್ಲಿಯೂ ಸೂಚನೆ ನೀಡಲಾಗಿದೆ.
ಅದಲ್ಲದೆ ಪ್ರಮುಖ ಜಂಕ್ಷನ್ ಗಳಲ್ಲಿ ಪೊಲೀಸರ ಜತೆ ಬಸ್ ಮಾಲಕರನ್ನು ನಿಲ್ಲಿಸಿ ಬಸ್ ಗಳಲ್ಲಿ ಕೈಗೊಳ್ಳಲಾಗುತ್ತಿರುವ ಸುರಕ್ಷತೆಯನ್ನು ಪರಿಶೀಲಿಸುವ ಕ್ರಮ ವಹಿಸಲಾಗುತ್ತಿದೆ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಅವರು ಮಾದ್ಯಮಗಳಿಗೆ ಮಾಹಿತಿ ನೀಡಿದರು.
ಡಿಸಿಪಿ ಅಂಶು ಕುಮಾರ್, ಎಸಿಪಿ ಗೀತಾ ಕುಲಕರ್ಣಿ ಈ ಸಂದರ್ಭ ಉಪಸ್ಥಿತರಿದ್ದರು.