LATEST NEWS
ಬಂಟ್ವಾಳದ ಸರಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗೂಂಡಾಗಿರಿ ಖಂಡನೀಯ- ಶಾಸಕ ವೇದವ್ಯಾಸ ಕಾಮತ್
ಬಂಟ್ವಾಳದ ಸರಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗೂಂಡಾಗಿರಿ ಖಂಡನೀಯ- ಶಾಸಕ ವೇದವ್ಯಾಸ ಕಾಮತ್
ಮಂಗಳೂರು ಡಿಸೆಂಬರ್ 9: ಬಂಟ್ವಾಳದ ಇಂದಿರಾ ಕ್ಯಾಂಟಿನ್ ಉದ್ಘಾಟನಾ ಸಂದರ್ಭದಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು, ಕಾಂಗ್ರೆಸ್ ಕಾರ್ಯಕರ್ತರು ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಅವರ ಮೇಲೆ ಹಲ್ಲೆ ಮಾಡಲು ಮುಂದಾದಂತಹ ಘಟನೆ ಬಗ್ಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.
ಬಂಟ್ವಾಳದ ಇಂದಿರಾ ಕ್ಯಾಂಟಿನ್ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮವೇ ವಿನ: ಅದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಅಲ್ಲಿ ಪ್ರೋಟೋಕಾಲ್ ಪ್ರಕಾರ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಭಾಗವಹಿಸುತ್ತಾರೆ. ಆದರೆ ಜನಪ್ರತಿನಿಧಿ ಅಲ್ಲದಂತಹ ವ್ಯಕ್ತಿಗಳನ್ನು ಸರಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಂತೆ ಬಿಂಬಿಸಿ ವಿಶೇಷ ಪ್ರಾತಿನಿಧ್ಯ ಕೊಡಲು ಹೋಗುವುದು ಸಮಂಜಸವಲ್ಲ ಎಂದು ಹೇಳಿದರು.
ಬಂಟ್ವಾಳದ ಸರಕಾರಿ ಕಾರ್ಯಕ್ರಮದಲ್ಲಿ ಕೇವಲ ಗಲಾಟೆ ಮಾಡುವ ಉದ್ದೇಶದಿಂದ ಬಂದಂತೆ ಕಾಣುವ ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಲಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅವಮಾನವಾಗುವಂತೆ ವರ್ತಿಸಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ. ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ಈ ರೀತಿ ವರ್ತಿಸಿದ ಕಾಂಗ್ರೆಸ್ ಕಾರ್ಯಕರ್ತರ ಮನಸ್ಥಿತಿ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಸರಿ ಹೋಗದೆ ಇದ್ದರೆ ಬಿಜೆಪಿ ಕಾರ್ಯಕರ್ತರು ಉಗ್ರ ಪ್ರತಿಭಟನೆಗೆ ಸಿದ್ಧರಾಗಬೇಕಾಗುತ್ತದೆ ಎಂದು ಶಾಸಕ ಕಾಮತ್ ಹೇಳಿದರು.
ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಆದ ಅವಮಾನ ಇಡೀ ಬಂಟ್ವಾಳದ ಜನತೆಗೆ ಮತ್ತು ಕರ್ನಾಟಕದ 224 ವಿಧಾನಸಭಾ ಸದಸ್ಯರಿಗೂ ಆದ ಅವಮಾನ ಎಂದು ಹೇಳಿದ ಶಾಸಕ ಕಾಮತ್, ಇದಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಮುಖಂಡರೇ ನೇರ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.